ಈಗ ಅಲೋಕ್ ವರ್ಮಾ ಹಣಿಯಲು ಷಡ್ಯಂತ್ರ

ನವದೆಹಲಿ, ಜ. ೧೨- ಸಿಬಿಐ ನಿರ್ದೇಶಕ ಸ್ಥಾನಕ್ಕೆ ನಿನ್ನೆಯಷ್ಟೆ ರಾಜೀನಾಮೆ ನೀಡಿರುವ ಅಲೋಕ್ ವರ್ಮಾ ಅವರು ಅಧಿಕಾರ ಸ್ಥಾನದಿಂದ ಮುಕ್ತಿ ಪಡೆದಿದ್ದರೂ ಹಲವಾರು ಆರೋಪಗಳು ಅವರ ಬೆನ್ನತ್ತಿದ್ದು, ಪ್ರಾಮಾಣಿಕ ಮತ್ತು ದಕ್ಷತೆಗೆ ಹೆಸರಾಗಿದ್ದ ಅಧಿಕಾರಿ ಕಂಟಕ ಎದುರಿಸುವಂತಾಗಿದೆ.

ಅಲೋಕ್ ವರ್ಮಾ ಅವರು ಆರ್ಥಿಕ ಅಪರಾಧಿಗಳಾದ ವಿಜಯ್‌ಮಲ್ಯ, ನೀರವ್ ಮೋದಿ ದೇಶ ಬಿಟ್ಟು ಹೋಗಲು ಸಹಕರಿಸಿದರು ಎಂಬುದೂ ಸೇರಿದಂತೆ 6 ಆರೋಪಗಳು ಅವರ ವಿರುದ್ಧ ಹೊರಿಸಲಾಗಿದ್ದು, ಈ ಬಗ್ಗೆ ಕೇಂದ್ರೀಯ ಜಾಗೃತ ದಳದ ಆಯೋಗ (ಸಿವಿಸಿ) ತನಿಖೆ ಕೈಗೊಂಡಿದೆ.

ಪಿಎನ್‌ಬಿ ಹಗರಣದ ಆರೋಪಿ ನೀರವ್ ಮೋದಿ ಅವರ ತಪ್ಪುಗಳನ್ನು ಮುಚ್ಚಿಹಾಕಲು ಕೆಲವು ಆಂತರಿಕ ಅಂತರ್ಜಾಲ ಸಂದೇಶಗಳ ಮಾಹಿತಿಯನ್ನು ಸೋರಿಕೆ ಮಾಡಿದ್ದರು ಎಂಬ ಆರೋಪ ಅಲೋಕ್ ವರ್ಮಾ ಅವರನ್ನು ಸುತ್ತಿಕೊಂಡಿದೆ.   ವಿಜಯ್‌ಮಲ್ಯ ಅವರ ಪತ್ತೆಗೆ ಸಂಬಂಧಿಸಿದ ಕಾರ್ಯಾಚರಣೆ ನಡೆಸಿರಲಿಲ್ಲ ಎಂಬ ಆರೋಪಗಳು ಅವರನ್ನು ಸುತ್ತಿಕೊಂಡಿವೆ.

ಏರ್‌ಸೆಲ್‌ನ ಮಾಜಿ ಪ್ರಮೋಟರ್ ಸಿ. ಶಿವಶಂಕರನ್ ಅವರ ಅಕ್ರಮಗಳು ಮುಚ್ಚಿ ಹೋಗಲು ಸಹಕರಿಸಿದ್ದರೆಂಬ ಆರೋಪವು ಅವರ ಬೆನ್ನತ್ತಿದೆ. ಈ ಎಲ್ಲ ಆರೋಪಗಳ ಬಗ್ಗೆ ಸಿವಿಸಿ ತನಿಖೆಯನ್ನು ಕೈಗೊಂಡಿದೆ.
ಸುಪ್ರೀಂಕೋರ್ಟ್‌ ಮುಂದೆ ಕಳೆದ ನ. 12 ರಂದು ವರ್ಮಾ ಅವರ ವಿರುದ್ಧದ ತನಿಖಾ ವರದಿಯನ್ನು ಭ್ರಷ್ಟಾಚಾರ ನಿಗ್ರಹ ದಳವಾದ ಸಿಬಿಐ ಸಲ್ಲಿಸಿತ್ತಾದರೂ ಈ ಪ್ರಕರಣ ಅಷ್ಟಕ್ಕೆ ಮುಗಿದಿಲ್ಲ. ವರ್ಮಾ ವಿರುದ್ಧದ ಹೊಸ ಆರೋಪಗಳ ಬಗ್ಗೆ ಸಿವಿಸಿ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ಮಾಡಿರುವ 10 ಆರೋಪಗಳ ಆಧಾರದ ಮೇಲೆ ತನಿಖೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾದ ವರದಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಾರ್ಕಿಕ ಅಂತ್ಯ ಕಾಣಿಸಲು ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳು ಮತ್ತು ಕಡತಗಳನ್ನು ಮಂಡಿಸುವಂತೆ ಕಳೆದ ಡಿ. 26 ರಂದು ಸಿವಿಸಿ, ಸಿಬಿಐಗೆ ಪತ್ರ ಬರೆದು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಮಲ್ಯ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ತನಿಖಾ ಸಂಸ್ಥೆ ಬುಧವಾರ ಸಿವಿಸಿಗೆ ಸಲ್ಲಿಸಿದೆ.
ನೀರವ್ ಮೋದಿ ಹಾಗೂ ಮಲ್ಯ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿದ್ದಾರೆ.
ನೀರವ್ ಮೋದಿ ಅವರ ವಿರುದ್ಧದ ಪ್ರಕರಣದಲ್ಲಿ ಸಮಗ್ರ ತನಿಖೆಗೆ ಮುಂದಾಗದ ಅಲೋಕ್ ವರ್ಮಾ, ಅವರಿಗೆ ಸಿಬಿಐನ ಕೆಲವು ಆಂತರಿಕ ಅಂತರ್ಜಾಲ ಸಂದೇಶಗಳ ಮಾಹಿತಿಯನ್ನು ಸೋರಿಕೆ ಮಾಡಿದ್ದರು ಎಂಬ ಆರೋಪ ಕುರಿತಂತೆ ತನಿಖೆ ನಡೆಸಲಾಗುತ್ತಿದೆ.
ನೀರವ್ ಮೋದಿ ಪ್ರಕರಣ ಕುರಿತು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಿಬಿಐನ ಹಿಂದಿನ ಜಂಟಿ ನಿರ್ದೇಶಕ ರಾಜೀವ್ ಸಿಂಗ್ ಅವರ ಕೊಠಡಿಗೆ ಕಳೆದ ಜೂನ್ ತಿಂಗಳಲ್ಲಿ ಬೀಗಮುದ್ರೆ ಹಾಕಲಾಗಿತ್ತು.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಂಪ್ಯೂಟರ್ ತುರ್ತು ತನಿಖಾ ತಂಡವನ್ನು ಕರೆಸಿ ಕಂಪ್ಯೂಟರ್‌ಗಳಲ್ಲಿದ್ದ ಡಾಟಾ ಪತ್ತೆ ಮಾಡಲು ಸಿಬಿಐ ಪ್ರಯತ್ನಿಸಿತ್ತು.
ಐಡಿಬಿಐ ಬ್ಯಾಂಕ್‌ನಿಂದ 600 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಶಿವಶಂಕರನ್ ಎಂಬುವರ ಪ್ರಕರಣವನ್ನೂ ಮುಚ್ಚಿ ಹಾಕುವ ಪ್ರಯತ್ನದ ಜತೆಗೆ ಅವರೂ ಭಾರತ ಬಿಟ್ಟು ಹೋಗಲು ವರ್ಮಾ ಸಹಕರಿಸಿದ್ದರು ಎಂಬ ಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ.

Leave a Comment