ಇಸ್ರೋಗೆ ಶತಕದ ಗರಿ 100ನೇ ಉಪಗ್ರಹ ಕಕ್ಷೆಗೆ ಸೇರಿಸಿ ಐತಿಹಾಸಿಕ ಸಾಧನೆ

ಶ್ರೀ ಹರಿಕೋಟಾ, ಜ. ೧೨- ಭಾರತ ಬಾಹ್ಯಾಕಾಶ ಸಾಧನೆಯಲ್ಲಿ ಇಂದು ಐತಿಹಾಸಿಕ ದಿನ. 710 ಕೆ.ಜಿ. ತೂಕದ ಭೂ ಪರಿವೀಕ್ಷಣೆಯ ಭಾರತದ ಕಾರ್ಟೊಸ್ಯಾಟ್-2 ಮತ್ತು 613 ಕೆಜಿ ತೂಕದ ಇತರ 30 ಉಪಗ್ರಹಗಳೊಂದಿಗೆ ಪಿಎಸ್‌ಎಲ್‌ವಿ-ಸಿ 40 ತನ್ನ 42ನೇ ಉಡ್ಡಯಾನದಲ್ಲಿ ಯಶಸ್ವಿಯಾಗಿ ನಭವನ್ನು ಸೇರಿತು. ಇದರೊಂದಿಗೆ ಭಾರತ 100ನೇ ಉಪಗ್ರಹವನ್ನು ಭೂಸ್ಮಿರಿ ಕಕ್ಷೆಗೆ ಸೇರಿಸಿದಂತಾಗಿದೆ.
ಇದು 2018ರಲ್ಲಿ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮೊದಲ ಉಪಗ್ರಹ ಉಡಾವಣೆ.
2017ರ ಆಗಸ್ಟ್ ತಿಂಗಳಲ್ಲಿ ಪಿಎಸ್ಎಲ್‌ವಿಯ ರಾಕೆಟ್ ಉಷ್ಣತಾ ರಕ್ಷಣೆಯ ರೆಕ್ಕೆ ಬಿಚ್ಚಿಕೊಳ್ಳಲು ವಿಫಲವಾಗಿದ್ದ ಕಾರಣ ಐಆರ್‌ಎನ್‌ಎಸ್ಎಸ್- 1 ಎಚ್ ಉಪಗ್ರಹ ಉಡಾವಣೆ ವಿಫಲಗೊಂಡಿತ್ತು.
ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ 9-29ಕ್ಕೆ ಪಿಎಸ್‌ಎಲ್‌ವಿ-ಸಿ40 ಭೋರ್ಗರೆಯುತ್ತಾ ಗಗನಕ್ಕೇರಿತು.
ಇಂದು ಕಾರ್ಟೊಸ್ಯಾಟ್-2 ಜತೆಗೆ ಅಮೆರಿಕ, ಫ್ರಾನ್ಸ್, ಫಿನ್ಲೆಂಡ್, ಬ್ರಿಟನ್, ದಕ್ಷಿಣಕೊರಿಯಾ ಮತ್ತು ಕೆನಡಾ ಮುಂತಾದ ದೇಶಗಳ ಇತರ 30 ಉಪಗ್ರಹಗಳೂ ಬಾಹ್ಯಾಕಾಶ ಸೇರಿವೆ.
ಉಡಾವಣೆಗೊಂಡ 17 ನಿಮಿಷಗಳ ನಂತರ 710 ಕೆಜಿ ತೂಕದ ಕಾರ್ಟೊಸ್ಯಾಟ್-2 ಉಪಗ್ರಹವನ್ನು ಸೌರ ಕಕ್ಷೆಗೆ ಸುಮಾರು 510 ಕಿ.ಮೀ. ಎತ್ತರದಲ್ಲಿ ಸೇರಿಸಲಾಯಿತು.
ನಂತರ 7 ನಿಮಿಷಗಳ ಅಂತರದಲ್ಲಿ ಇತರ 29 ನ್ಯಾನೋ ಉಪಗ್ರಹಗಳನ್ನು ಕಕ್ಷೆಗಳಿಗೆ 519 ಕಿ.ಮೀ. ಎತ್ತರದಲ್ಲಿ ಸೇರಿಸಲಾಯಿತು.
ಇದೊಂದು ಅದ್ಭುತ ಸಾಧನೆ, ಕಾರ್ಟೊಸ್ಯಾಟ್‌ನ ಕಾರ್ಯ ನಿರ್ವಹಣೆ ಸಂಪೂರ್ಣ ತೃಪ್ತಿಕರವಾಗಿದೆ ಎಂದು ನಿವೃತ್ತಿಗೊಳ್ಳುತ್ತಿರುವ ಇಸ್ರೋ ಅಧ್ಯಕ್ಷ ಕಿರಣ್‌ಕುಮಾರ್ ಹೇಳಿದ್ದಾರೆ.
ಉಪಗ್ರಹಗಳ ಯಶಸ್ವಿ ಉಡಾವಣೆಯ ಬಗ್ಗೆ ಇಸ್ರೋದ ಹೊಸ ಅಧ್ಯಕ್ಷ ಕೆ. ಶಿವನ್ ಸಂತಸ ವ್ಯಕ್ತಪಡಿಸಿದ್ದು, ಉಡಾವಣೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
`ಈ ಯಶಸ್ವಿ ಉಡಾವಣೆಯೊಂದಿಗೆ ನಾವು ದೇಶಕ್ಕೆ ಹೊಸ ವರ್ಷದ ಉಡುಗೊರೆ ನೀಡಿದ್ದೇವೆ` ಎಂದು ನಿವೃತ್ತಿಯಾಗುತ್ತಿರುವ ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ಹೇಳಿದ್ದಾರೆ.
ಪಿಎಸ್ಎಲ್‌ವಿ- ಸಿ40 ಯಶಸ್ವಿಯಾಗಿ ಉಡಾವಣೆಯಾಗುತ್ತಿದ್ದಂತೆ ವಿಜ್ಞಾನಿಗಳು ನಿರಾಳದ ನಿಟ್ಟುಸಿರಿಟ್ಟರು.
ಬಾಹ್ಯಾಕಾಶದಲ್ಲಿನ `ಕಸ`ಕ್ಕೆ ಡಿಕ್ಕಿ ಹೊಡೆದೀತೆಂಬ ಭೀತಿಯಿಂದ ಉಡಾವಣೆಯ ಕ್ಷಣಗಣನೆಯನ್ನು 1 ನಿಮಿಷ ತ‌ಡವಾಗಿ ಆರಂಭಿಸಲಾಗಿತ್ತು.

Leave a Comment