ಇಸ್ರೇಲ್‌ನಲ್ಲಿ ನೆಲೆಸಿದ್ದ ಕರ್ನಾಟಕದ ದಂಪತಿ, ಮಕ್ಕಳು ಗಡಿಪಾರು ಸಾಧ್ಯತೆ

ಜೆರುಸಲೇಂ.ನ.8. ಇಸ್ರೇಲ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದು, ಬಂಧಿತರಾಗಿರುವ ಕರ್ನಾಟಕದ ದಂಪತಿ ಮತ್ತು ಅವರ ಇಬ್ಬರು ಮಕ್ಕಳನ್ನು ಶೀಘ್ರದಲ್ಲೇ ಗಡಿಪಾರು ಮಾಡಲಾಗುವುದು ಎಂದು ಇಸ್ರೇಲ್ ವಲಸೆ ಪ್ರಾಧಿಕಾರ ತಿಳಿಸಿದೆ.

ಕರ್ನಾಟಕದವರಾದ ಟೀನಾ, ಮಿನಿನ್ ಲೋಪೆಜ್ ದಂಪತಿ ಹಾಗೂ ಅವರ ಮಕ್ಕಳಾದ ಎಲಿಯಾನಾ (7), ಒಂದೂವರೆ ವರ್ಷದ ಮಗುವನ್ನು ಇಸ್ರೇಲ್ ವಲಸೆ ಪ್ರಾಧಿಕಾರ ಗುರುವಾರ ಬಂಧಿಸಿದೆ.
ಬಂಧಿತರನ್ನು ಇಲ್ಲಿನ ಬೀಟ್ ದಗನ್ ಬಂಧನ ಕೇಂದ್ರದಲ್ಲಿರಿಸಲಾಗಿದ್ದು, ಕೆಲ ಔಪಚಾರಿಕ ವಿಧಿ-ವಿಧಾನಗಳು ಪೂರ್ಣಗೊಂಡ ಬಳಿಕ ಕುಟುಂಬವನ್ನು ಗಡಿಪಾರು ಮಾಡಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ ನರ್ಸ್‌ ವೃತ್ತಿಗಾಗಿ ಇಸ್ರೇಲ್‌ಗೆ ತೆರಳಿದ್ದ ಟೀನಾ, ಮಿನಿನ್ ದಂಪತಿಗೆ ಅಲ್ಲಿಯೇ ಎರಡು ಮಕ್ಕಳಾಗಿದ್ದವು. ಎಲಿಯಾನಾ, ಟೆಲ್ ಅವೀವ್‌ನ ಶಾಲೆಯಲ್ಲಿ ಓದುತ್ತಿದ್ದಾಳೆ. ಒಂದೂವರೆ ವರ್ಷದ ಹಿಂದೆ ದಂಪತಿಗೆ ಎರಡನೇ ಮಗು ಜನಿಸಿದೆ.
ಕಿರಿಯ ಮಗುವನ್ನು ಹೊರತುಪಡಿಸಿ, ಹಿರಿಯ ಮಗಳು ಎಲಿಯಾನಾಳ ಜನನ ನೋಂದಣಿಗಾಗಿ 2018ರ ಫೆಬ್ರುವರಿಯಲ್ಲಿ ದಂಪತಿ, ಭಾರತೀಯ ರಾಯಭಾರ ಕಚೇರಿಗೆ ಭೇಟಿ ನೀಡಿತ್ತು. ಆದರೆ, ಅಲ್ಲಿನ ಔಪಚಾರಿಕ ನಿಯಮಗಳನ್ನು ಪೂರ್ಣಗೊಳಿಸಿರಲಿಲ್ಲ.
ಬಂಧಿಸುವ ಅಧಿಕಾರ ಇಲ್ಲ:
‘ಮಕ್ಕಳನ್ನು ಬಂಧಿಸುವ ಅಧಿಕಾರವನ್ನು ಇಸ್ರೇಲ್ ವಲಸೆ ಪ್ರಾಧಿಕಾರ ಹೊಂದಿಲ್ಲ ಮತ್ತು ಅದಕ್ಕೆ ಬಂಧನದ ವಾರೆಂಟ್‌ ಅನ್ನೂ ಹೊರಡಿಸಲು ಅನುಮತಿ ಇಲ್ಲ. ವಲಸೆ ಪ್ರಾಧಿಕಾರವು, ಇಸ್ರೇಲ್‌ನ ನ್ಯಾಯ ಸಚಿವಾಲಯ ಮತ್ತು ನ್ಯಾಯಾಲಯದ ಸೂಚನೆಗಳನ್ನು ಪಾಲಿಸುವ ಬದಲು, ಕುಟುಂಬನ್ನು ಬೆದರಿಸುವ ಕ್ರಮ ಮುಂದುವರಿಸಿದೆ’ ಎಂದು ದಂಪತಿಯ ಪರ ವಕೀಲ ಡೇವಿಡ್ ಟಾಡ್ಮೋರ್ ಹೇಳಿದ್ದಾರೆ.
ಇಸ್ರೇಲ್‌ನಲ್ಲಿ ಅಕ್ರಮ ವಲಸೆ ಕಾರ್ಮಿಕ ಸಂಖ್ಯೆ ಹೆಚ್ಚಾಗಿದ್ದು, ಅವರ ಮೇಲೆ ದಬ್ಬಾಳಿಕೆ ನಡೆಯುವ ವೇಳೆಯೇ ಕರ್ನಾಟಕದ ದಂಪತಿ ಮತ್ತು ಮಕ್ಕಳನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಇಸ್ರೇಲ್‌ನಲ್ಲಿ ಜನಿಸಿದ್ದ ಫಿಲಿಪ್ಪೈನ್ಸ್‌ ದೇಶದ ಜೆನಾ ಆಂಟಿಗೊ (13) ಮತ್ತು ರಾಲ್ಫ್ ಹರೆಲ್ (10) ಅವರು‌ ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಅವರನ್ನು ವಲಸೆ ಪ್ರಾಧಿಕಾರ ಬಂಧಿಸಿತ್ತು. ಮಕ್ಕಳ ಬಂಧನ ಮತ್ತು ಅವರ ತಾಯಂದಿರನ್ನು ಗಡೀಪಾರು ಮಾಡುವ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಾಧಿಕಾರದ ನಿರ್ಧಾರ ತಪ್ಪು ಎಂದು ನ್ಯಾಯಾಲಯ ತೀರ್ಪು ನೀಡಿದ ಬಳಿಕ ಜೆನಾ ಆಂಟಿಗೊ ಮತ್ತು ರಾಲ್ಫ್ ಹರೆಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇಸ್ರೇಲ್‌ನಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಗಡಿಪಾರು ಮಾಡುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

Leave a Comment