ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ..

ಖಾಸಗಿಯಾಗಿ ಬರೀತಾ ಸಾರ್ವಜನಿಕವಾಗುವುದೇ ಭಾವಗೀತೆಯ ಗುಟ್ಟು” ಎಂದು ಖ್ಯಾತ ಕವಿ ಹೆಚ್. ಎಸ್. ವೆಂಕಟೇಶ ಮೂರ್ತಿ ಅವರು ಭಾವ ದೊತ್ತಡದಲ್ಲಿ ಕವಿತೆ ಹುಟ್ಟುವ ಗುಟ್ಟನ್ನು ಬಯಲಿಗಿಟ್ಟಿದ್ದರು. ಇದಕ್ಕೆ ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ’ ಅವರದೇ ಭಾವಗೀತೆ ಕಾರಣವಾಗಿತ್ತು.  ದಶಕಗಳಿಂದ ಎಲ್ಲಾ ಪೀಳಿಗೆಯವರಿಗೂ ಇಷ್ಟವಾಗುತ್ತಲೇ ಬಂದಿರುವ ಈ ಗೀತೆ ಎಲ್ಲರ ಆಂತರ್ಯವನ್ನು ಬಿರಿದು ತೋರಿಸುತ್ತದೆ. ಇಲ್ಲಿ ಕವಿಯ ಖಾಸಗಿ ಭಾವ ಸಾರ್ವಜನಿಕವಾಗುತ್ತದೆ ಕವಿಯ ಭಾವ ಎಲ್ಲರ ಭಾವವು ಆಗುತ್ತದೆ ಎನ್ನುವಂತಹ ವಿವರಗಳನ್ನು ನೀಡುವಾಗ ಅವರಲ್ಲಿ ಕವಿಯ ಸಂತಸ ಸಹಜವಾಗಿಯೇ ಇತ್ತು.

ಮೊದಲಿನಿಂದಲೂ ಯುವಜನರನ್ನು ಪ್ರೋತ್ಸಾಹಿಸುತ್ತಲೇ ಬಂದಿರುವ ಅವರು, ಏಪ್ರಿಲ್‌ನ ಹಿಮಬಿಂದು ಚಿತ್ರದಲ್ಲಿ ಈ ಭಾವಗೀತೆಯನ್ನು ಹೊಸ ರಾಗ ಸಂಯೋಜನೆಯಲ್ಲಿ ಬಳಸಿಕೊಳ್ಳಲು  ಅನುಮತಿ ಕೊಟ್ಟಿರುವ ಜೊತೆಗೆ ಚಿತ್ರದ ಹಾಡುಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದರು. ಬೆಂಗಳೂರಿನಿಂದ ತಮ್ಮೂರು ಹೊಳಲ್ಕೆರೆಗೆ ಹೊರಟಿದ್ದ ತಮಗೆ ಈ ಭಾವಗೀತೆಯ ಮೊದಲ ಸಾಲು ಹೊಳೆದು ಬರೆಯುವ ಭಾವ ತುಂಬಿ ಬಂತು. ಆದರೆ ಬರೆಯಲು ಕಾಗದ ಇರಲಿಲ್ಲ ಟಿಕೇಟ್‌ನ ಹಿಂಭಾಗದಲ್ಲಿಯೇ ಬರೆಯುತ್ತಾ ಊರು ತಲುಪುವ ವೇಳೆಗೆ ಪೂರ್ತಿಯಾಗಿತ್ತು ಎಂದು ಹಳೇ ನೆನಪಿಗೆ ಜಾರಿದ್ದರು.

ಈ ಸಾಲುಗಳು ಮೂಡಲು ವೈಯಕ್ತಿಕ ಅನುಭವವೂ ಕಾರಣವಾಗಿತ್ತಾ? ಎನ್ನುವ ಪ್ರಶ್ನೆಗೆ ಅವರು ಕವಿತೆ ಹುಟ್ಟುವ ಪರಿಯನ್ನು ಸಾರ್ವಜನಿಕವಾಗಿ ತೆರೆದಿಟ್ಟರು. ಈ ಭಾವಗೀತೆಯನ್ನು ರತ್ನಮಾಲ ಪ್ರಕಾಶ್ ಮತ್ತು ದಿ. ಅಶ್ವತ್ಥ್ ಹಾಡಿರುವುದು ಪ್ರಸಿದ್ಧವಾಗಿದೆ ರಾಗ ಸಂಯೋಜನೆಯೂ ಸರ್ವಕಾಲಕ್ಕೂ ಮನಸ್ಸನ್ನು ಕಾಡುವಂತಿದೆ. ಇದರಿಂದಲೇ ಸ್ಫೂರ್ತಿ ಪಡೆದು ಸಿನೆಮಾಕ್ಕೆ ಹೊಸದಾಗಿ ರಾಗ ಸಂಯೋಜಿಸಿದ್ದಾರೆ ಸಂಗೀತ ನಿರ್ದೇಶಕ ಭರತ್ ಬಿ.ಜಿ. ಚಿತ್ರದ ಕಥೆಗೆ ಈ ಭಾವಗೀತೆ ಹೊಂದುತ್ತದೆ ಎಂದು ಬಳಸಿಕೊಳ್ಳಲು ಸೂಚಿಸಿದ್ದೇ ಅವರಾಗಿದ್ದಾರೆ.

ತಮ್ಮದೇ ರೆಕಾರ್ಡ್ ಸಂಸ್ಥೆಯಿಂದ ಸಿಡಿಯನ್ನು ಹೊರತಂದಿದ್ದಾರೆ. ಅಲ್ಲದೆ ಯೋಗರಾಜ್ ಭಟ್ ಬರೆದಿರುವ ಟೈಟಲ್ ಸಾಂಗ್‌ನ ರಘು ದೀಕ್ಷಿತ್ ಅವರಿಂದ ಹಾಡಿಸಿದ್ದಾರೆ. ಇದು ಅಮೇರಿಕನ್ ಫೋಕ್ ಸ್ಟೈಲ್‌ನಲ್ಲಿ ಇದೆಯಂತೆ. ಚಿತ್ರದ ಕಥೆಯನ್ನು ಬಿಂಬಿಸುವ ಈ ಹಾಡಿನ ಪದಪದವನ್ನೂ ಅನುಭವಿಸಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಾಡಿರುವ ಖುಷಿಯನ್ನು ರಘು ದೀಕ್ಷಿತ್ ಹಂಚಿಕೊಂಡರು.

ನಿರ್ದೇಶಕ ದ್ವಯರಾದ ಶಿವ ಮತ್ತು ಜಗನ್ ತಮ್ಮ ಸುತ್ತಲು ನಡೆದ ಘಟನೆಗಳನ್ನೇ ತೆಗೆದುಕೊಂಡು ಸಿನೆಮಾ ಮಾಡಿದ್ದಾರೆ. ನಮ್ಮ ನಡುವಿನ ಜೀವನವನ್ನೇ ಪ್ರತಿಬಿಂಬಿಸಿ ಹೊಸತನದಲ್ಲಿ ಮಾಡಿರುವ ಚಿತ್ರವೆನ್ನುವ ಸುಳಿವನ್ನು ಚಿತ್ರತಂಡ ಕೊಟ್ಟಿದೆ. ಇದು ಹೆಚ್. ಎಸ್. ವೆಂಕಟೇಶ್‌ಮೂರ್ತಿಯವರ ಮೆಚ್ಚುಗೆಗೂ ಕಾರಣವಾಗಿದೆ. ಚಿತ್ರಕ್ಕೆ ಆ ಕ್ಷಣ ಎಂದು ಹೆಸರನ್ನು ಆಯ್ಕೆ ಮಾಡಲಾಗಿತ್ತು ಆದರೆ ಮೊದಲೇ ಬೇರೆಯವರು ರಿಜಿಸ್ಟರ್ ಮಾಡಿಸಿದ್ದರಿಂದ ಸಿಕ್ಕಿಲ್ಲ. ಹಾಗಾಗಿ ಏಪ್ರಿಲ್ ನ ಹಿಮಬಿಂದು ಎಂದು ಹೆಸರಿಡಲಾಗಿದೆ.

ಈ ಹೆಸರಿಗೂ ಆ ಕ್ಷಣ ಎನ್ನುವ ಅರ್ಥವೇ ಇದೆಯಂತೆ ಇದನ್ನು ಹುಡುಕಿಕೊಟ್ಟಿದ್ದಾರೆ ಪ್ರಮುಖ ಪಾತ್ರಧಾರಿಯಾಗಿರುವ ದತ್ತಣ್ಣ. ಅಂದಹಾಗೆ ಇದನ್ನು ಹುಡುಕಿರುವುದು ಯಾವ ಶಬ್ಧಕೋಶದಿಂದ? ಎನ್ನುವುದನ್ನು  ಸದ್ಯಕ್ಕೆ ಮರೆತಿರುವ ದತ್ತಣ್ಣ ಚಿತ್ರ ತೆರೆಕಾಣುವಷ್ಟರಲ್ಲಿ ನೆನಪಿಸಿಕೊಂಡು ತಿಳಿಸುತ್ತಾರಂತೆ. ಅವರ ಪ್ರಕಾರ, ಅರ್ಥಪೂರ್ಣ ಬದುಕಿನ ಸೂತ್ರವೇನು? ಇದರ ಹುಡುಕುವ ಪ್ರಯತ್ನವಾಗಿದೆ ಏಪ್ರಿಲ್‌ನ ಹಿಮಬಿಂದು.

Leave a Comment