ಇಶಾನ್ ರೋಗ್ ಗೆ ಪೂರಿ ಸಾಥ್

ಅಪ್ಪು ಚಿತ್ರದ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ನಾಯಕ ನಟನಾಗಿ ಪರಿಚಯಿಸಿದ ತೆಲುಗಿನ ಹೆಸರಾಂತ ನಿರ್ದೇಶಕ ಪೂರಿ ಜಗನ್ನಾಥ್ ಇದೀಗ ೧೫ ವರ್ಷಗಳ ಬಳಿಕ ಇಶಾನ್ ಅವರನ್ನು ‘ರೋಗ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲು ಭೂಮಿಕೆ ಸಿದ್ಧಪಡಿಸಿದ್ದಾರೆ.

ಚಿತ್ರವನ್ನು ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಏಕಕಾಲಕ್ಕೆ ಸಿ.ಆರ್ ಗೋಪಿ ನಿರ್ಮಾಣ ಮಾಡಿದ್ದಾರೆ. ರೋಗ್ ಮೂಲಕ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಸಹೋದರಿ ಮನ್ನಾರ ಛೋಪ್ರಾ ನಾಯಕಿಯಾಗಿ ಪರಿಚಯವಾಗಿದ್ದು, ಅವರೊಂದಿಗೆ ಏಂಜಲೀನಾ ಕೂಡ ಕಾಣಿಸಿಕೊಂಡಿದ್ದಾರೆ. ಇಶಾನ್ ನಿರ್ಮಾಪಕ ಮನೋಹರ್ ಅವರ ಸೋದರ. ಹಾಗಾಗಿ, ಚಿತ್ರವನ್ನು ಮೂರು ಭಾಷೆಯಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಕಳೆದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವಿತ್ತು. ನಿರ್ದೇಶಕ ಪೂರಿ ಜಗನ್ನಾಥ್, ತೆಲುಗಿನ ನಟ ಶ್ರೀಕಾಂತ್, ಹಾಸ್ಯನಟ ಆಲಿ, ಜೊತೆಗೆ ಕನ್ನಡದ ನಟರಾದ ಕಿಚ್ಚಾ ಸುದೀಪ್, ನಿರ್ದೇಶಕರಾದ ಪ್ರೇಮ್, ಸುನಿಲ್ ಕುಮಾರ್ ದೇಸಾಯಿ, ನಟಿಯರಾದ ರಕ್ಷಿತಾ, ರಾಗಿಣಿ, ಸಂಜನಾ, ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಹಲವು ಮಂದಿ ಆಗಮಿಸಿದ ಹೊಸ ಹುಡುಗ ಇಶಾನ್ ಅವರನ್ನು ಚಿತ್ರರಂಗಕ್ಕೆ ಅದ್ಧೂರಿಯಾಗಿ ಸ್ವಾಗತಿಸಿ ಚಿತ್ರರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಈ ವೇಳೆ ಮಾತಿಗಿಳಿದ ನಿರ್ಮಾಪಕ ಸಿ.ಆರ್. ಮನೋಹರ್, ತಮ್ಮನನ್ನು ಚಿತ್ರರಂಗಕ್ಕೆ ಪೂರಿಜಗನ್ನಾಥ್ ಅವರ ಮೂಲಕ ಪರಿಚಯಿಸುವಂತೆ ನಟಿ ರಕ್ಷಿತಾ ಸಲಹೆ ನೀಡಿದರು. ಅದರಂತೆ ಮೂರು ಭಾಷೆಯಲ್ಲಿ ಚಿತ್ರ ಮಾಡಿದ್ದೇವೆ. ಇಶಾನ್‌ನನ್ನು ಮನೆ ಮಂದಿಯೆಲ್ಲ ಪುಟ್ಟ ಮಗು ರೀತಿ ಬೆಳೆಸಿದ್ದೇವೆ. ಚಿತ್ರ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ಚಿತ್ರರಂಗದಲ್ಲಿ  ಎತ್ತರಕ್ಕೆ ಬೆಳೆಯುತ್ತಾನೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.  ನಟ ಇಶಾನ್, ಸುದೀಪ್ ನನಗೆ ಅಣ್ಣ ಇದ್ದ ಹಾಗೆ, ಚಿತ್ರದ ಟ್ರೈಲರ್ ನೋಡಿ ಹರಸಿ ಆರೈಸಿದ್ದಾರೆ.

ಜೊತೆಗೆ ಚಿತ್ರರಂಗದ ಘಟಾನುಘಟಿಗಳೆಲ್ಲ ಆಗಮಿಸಿ ಶುಭ ಕೋರಿರುವುದು ನನ್ನಲ್ಲಿ ಉತ್ಸಾಹ ಹೆಚ್ಚು ಮಾಡಿದೆ. ಜೊತೆಗೆ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ, ಧ್ವನಿ ಸುರುಳಿ ಬಿಡುಗಡೆಗೆ ಇಡೀ ಕುಟುಂಬ ಆಗಮಿಸಿರುವುದು ಸಂತೋಷಕ್ಕೆ ಪಾರವೇ ಇಲ್ಲ.

ಎಲ್ಲ ಮಂದಿಯನ್ನು ಒಟ್ಟಿಗೆ ನೋಡುವುದೇ ಸಂತಸದ ಸಂಗತಿ. ಚಿತ್ರರಂಗದಲ್ಲಿ ಬೆಳೆಯಲು ಎಲ್ಲರ ಆರೈಕೆ, ಆಶೀರ್ವಾದ, ಬೆಂಬಲ ಬೇಕು ಎಂದು ಕೇಳಿಕೊಂಡರು.
ನಿರ್ದೇಶಕ ಪೂರಿ ಜಗನ್ನಾಥ್ ಇದೊಂದು ಮುದ್ದಾದ ಲವ್ ಸ್ಟೋರಿ, ಇಶಾನ್‌ಗೆ ಮೊದಲ ಚಿತ್ರದಲ್ಲೇ ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ಆತನ ಅದೃಷ್ಟ. ಇದೊಂದು ಮನರಂಜನಾತ್ಮಕ ಚಿತ್ರ. ಎಲ್ಲರಿಗೂ ಇಷ್ಟವಾಗಲಿದೆ.

ಚಿತ್ರದಲ್ಲಿ ಮನ್ನಾರ ಛೋಪ್ರಾ ಹಾಗೂ ಏಂಜಲೀನಾ, ಖಳನಟ ಅನೂಪ್ ಸಿಂಗ್ ಠಾಕೂರ್ ಸೇರಿದಂತೆ ಮತ್ತಿತರರು ಕಾಣಿಸಿಕೊಂಡಿದ್ದು, ಕನ್ನಡದ ಹುಡುಗ ಸುನೀಲ್ ಕಶ್ಯಪ್ ಸಂಗೀತ ನೀಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ನಟಿಯರಾದ ಮನ್ನಾರ ಛೋಪ್ರಾ, ಏಂಜಲೀನಾ ಸೇರಿದಂತೆ ಇಡೀ ತಂಡ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

Leave a Comment