ಇವರು ಅದಿತಿ ಪ್ರಭುದೇವ್…

‘ಧೈರ್ಯಂ’ ಚಿತ್ರದಿಂದ ಅಪ್ಪಟ ಕನ್ನಡದ ಹುಡುಗಿ ಅದಿತಿ ಪ್ರಭುದೇವ್ ಅವರನ್ನು ನಾಯಕಿಯಾಗಿ ಪರಿಚಯಿಸುತ್ತಿದ್ದೇವೆ. ಅದಿತಿ ಖಂಡಿತವಾಗಿ ಕನ್ನಡ ಚಿತ್ರರಂಗದಲ್ಲಿ ಉತ್ತಮ ನಾಯಕಿಯಾಗಿ ಬೆಳೆಯುತ್ತಾರೆ” ಈ ವಿಶ್ವಾಸ ಮತ್ತು ಮೆಚ್ಚುಗೆಯ ಮಾತನಾಡಿದವರು ಅಜಯ್ ರಾವ್ ಮತ್ತು ಶಿವ ತೇಜಸ್.

ಈ ಪ್ರಶಂಸೆಗೆ ಪಾತ್ರವಾದ ಅದಿಯ ನಿಜವಾದ ಹೆಸರು ಸುದೀಪನಾ ಈ ಹೆಸರಿನಿಂದ ಈಗಾಗಲೇ ಕಿರುತೆರೆಯಲ್ಲಿ ಪರಿಚಿತೆ. ಬಿಇ ಮಾಡಿ ಎಂಬಿಎ ಓದಿರುವ ಅವರು ದೃಶ್ಯಮಾಧ್ಯಮದೆಡೆಗಿನ ಸೆಳೆತದಿಂದಾಗಿ ನಿರೂಪಕಿಯಾಗಿ ಕಾಣಿಸಿಕೊಳ್ಳತೊಡಗಿದರು. ಮೂಲತಃ ದಾವಣಗೆರೆಯವರಾಗಿರುವುದರಿಂದ ಕನ್ನಡ ಮಾತನಾಡುವುದಕ್ಕೆ ಬರವಿರಲಿಲ್ಲ. ಅರುಳುಹುರಿದಂತೆ ಮಾತನಾಡುತ್ತಾರೆ ಜೊತೆಗೆ ಒಮ್ಮೆ ಮಾತನಾಡಿಸಿದವರಿಗೆ ಮತ್ತೆಮತ್ತೆ ಮಾತನಾಡಿಸಬೇಕೆನ್ನುವ ಸೆಳೆತ ಖಂಡಿತ ಮೂಡಿಸುತ್ತಾರೆ.

ನಟಿ ಆಗಲೇಬೇಕೆನ್ನುವ ಕನಸು ಇರಲಿಲ್ಲ ಆದರೆ ನಟನೆಯತ್ತ ಆಕರ್ಷಣೆ ಇತ್ತು. ಹೀಗಾಗಿ ತಾನಾಗಿಯೇ ಹುಡುಕಿಕೊಂಡು ಬಂದ ಅವಕಾಶವನ್ನು ಪಕ್ಕಕ್ಕೆ ತಳ್ಳಲಿಲ್ಲ, ನಿರೂಪಕಿಯಾಗಿದ್ದ ಅವರನ್ನು ಧಾರಾವಾಹಿಯಲ್ಲಿ ನಟಿಸ್ತೀರಾ? ಎಂದು ಕೇಳಿದಾಗ ಯಾಕೆ ಒಂದುಕೈ ನೋಡಬಾರದು ಎಂದೆನಿಸಿ ಒಪ್ಪಿಕೊಂಡೇಬಿಟ್ಟರು. ಹಾಗೆ ನಟಿಸಿದ ಧಾರಾವಾಹಿನೇ ‘ಗುಂಡ್ಯಾನ ಹೆಂಡ್ತಿ’. ಒಮ್ಮೆ ಬಣ್ಣಹಚ್ಚಿ ಕಾಮೆರಾದ ಪ್ರೀತಿಗೆ ಸಿಲುಕಿದ ಮೇಲೆ ಆ ಸೆಳೆತದಿಂದ ತಪ್ಪಿಸಿಕೊಳ್ಳಲು ಸುಲಭವಾಗಿ ಸಾಧ್ಯವಿಲ್ಲ.

ಕಿರುತೆರೆಯಿಂದ ಸಿನೆಮಾಕ್ಕೆ ಯಾಕೆ ಪ್ರಯತ್ನಿಸಬಾರದು ಎಂದೆನಿಸಿ ಧೈರ್ಯಂ ಚಿತ್ರಕ್ಕೆ ಆಡಿಷನ್ ನಡಿತಿದೆ ಎಂದು ಗೊತ್ತಾದಾಗ ಹಾಜರಾದರು. ಒಂದೇ ಸಲಕ್ಕೆ ಆಯ್ಕೆ ನಡೆಯಲಿಲ್ಲ ಮೂರು ಬಾರಿ ಆಡಿಷನ್‌ಗೆ ಹೋದರು. ಅಲ್ಲಿ ಮೂರು ಪುಟಗಳ ಉದ್ದುದ್ದದ ಸಂಭಾಷಣೆ ಕೊಟ್ಟರು. ಅದಕ್ಕೂ ಅಂಜಲಿಲ್ಲ ಭಾವಾಭಿನಯದೊಂದಿಗೆ ಸಂಭಾಷನೆ ಒಪ್ಪಿಸಿದರು. ಮೊದಲೇ ಮಾತಿನ ಚತುರೆ ನಿರೂಪಕಿಯಾಗಿದ್ದವರು ಕೊನೆಗೆ ಅದೆಷ್ಟೋ ಹುಡುಗಿಯರನ್ನು ಹಿಂದಿಕ್ಕಿ ನಾಯಕಿಯಾಗಿ ಆಯ್ಕೆಯಾದರು.

ಮೊದಲ ಸಿನೆಮಾದಲ್ಲೇ ಅಜಯ್‌ರಾವ್‌ಗೆ ನಾಯಕಿಯಾಗಿ ನಟಿಸಿರುವುದರ ಜೊತೆಗೆ ‘ಧೈರ್ಯಂ’ ಚಿತ್ರತಂಡದೊಂದಿಗೆ ಕೆಲಸ ಮಾಡಲು ಸಾಧ್ಯವಾಗಿರುವುದಕ್ಕೆ ತಾವು ಅದೃಷ್ಟವಂತೆ ಎನ್ನುವ ಖುಷಿಯಲ್ಲಿ ಇದ್ದಾರೆ. ಅದೂ ಅಲ್ಲದೆ ಸುದೀಪಾನಾ ಎನ್ನುವುದು ಸುದೀಪಣ್ಣ ಎಂದು ಕೇಳಿಸುತ್ತದೆ ಸ್ಟಾರ್ ನಟ ಸುದೀಪ್ ಅಂತ ಭಾವಿಸುವ ಸಾಧ್ಯತೆ ಇದೆ ಎಂದೆನಿಸಿ ನಿರ್ದೇಶಕ ಶಿವ ತೇಜಸ್ ಅದಿತಿಯಾಗಿ ಹೆಸರು ಬದಲಾಯಿಸಿದ್ದಾರೆ.

ಹೊಸ ಹೆಸರಿನಲ್ಲಿ ಹೊಸ ಆಸೆಗಳ ಹೊತ್ತು ಸಿನೆಮಾರಂಗ ಪ್ರವೇಶಿಸಿರುವ ಅವರಿಗೆ ಈಗಿರುವ ದೊಡ್ಡ ಕನಸೆಂದರೆ ಒಳ್ಳೊಳ್ಳೆ ಚಿತ್ರಗಳಲ್ಲಿ ನಟಿಸಿ ಕನ್ನಡಿಗರು ನಮ್ಮ ಹುಡುಗಿ ಎಂದು ಹೆಮ್ಮೆ ಪಟ್ಟುಕೊಳ್ಳುವ ಎತ್ತರಕ್ಕೆ ಬೆಳೆಯಬೇಕು ಎನ್ನುವುದಾಗಿದೆ.
-ಕೆ.ಬಿ. ಪಂಕಜ

Leave a Comment