ಇಳಯರಾಜಾ ಗೆ ಕೇರಳ ಸರ್ಕಾರದ ಪ್ರತಿಷ್ಠಿತ “ಹರಿವರಾಸನಂ” ಪುರಸ್ಕಾರ

ಚೆನ್ನೈ, ಡಿ ೨೭- ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರು ಮತ್ತೊಂದು ಮಹತ್ವದ ಗೌರವಕ್ಕೆ ಭಾಜನರಾಗಿದ್ದಾರೆ.
ಕೇರಳ ರಾಜ್ಯ ಸರ್ಕಾರ ಅವರಿಗೆ ಪ್ರತಿಷ್ಠಿತ “ಹರಿವರಾಸನಂ” ಪುರಸ್ಕಾರವನ್ನು ಪ್ರಕಟಿಸಿದೆ. ಈ ಪ್ರಶಸ್ತಿಯನ್ನು ಮುಂದಿನ ತಿಂಗಳು ೧೫ ರಂದು ವಿಶ್ವವಿಖ್ಯಾತ ಅಯ್ಯಪ್ಪನ ಆವಾಸ ಸ್ಥಾನವಾಗಿರುವ ಶಬರಿಮಲೆಯಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಇಳಯರಾಜಾ ಅವರಿಗೆ ಕೇರಳ ರಾಜ್ಯ ಸರ್ಕಾರ ಪ್ರದಾನ ಮಾಡಲಿದೆ.

ಕನ್ನಡ ಸೇರಿದಂತೆ ದಕ್ಷಿಣದ ಚಲನಚಿತ್ರೋದ್ಯಮದ ಅದೆಷ್ಟೋ ಚಿತ್ರಗಳಿಗೆ ಸಂಗೀತ ಸಂಯೋಜಿಸಿ, ಎಷ್ಟೋ ಅದ್ಭುತ ಗೀತೆಗಳನ್ನು ನೀಡಿ, ಸಂಗೀತ ನಿಧಿ ಎಂದು ಹೆಸರುವಾಸಿಯಾಗಿರುವ ಇಳಯರಾಜಾ ಅವರಿಗೆ ಹಲವು ಗೌರವ, ಪ್ರಶಸ್ತಿಗಳು ಸಂದಿವೆ.

ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ನಾಗರೀಕ ಪುರಸ್ಕಾರ ಪದ್ಮವಿಭೂಷಣಕ್ಕೂ ಭಾಜನರಾಗಿದ್ದಾರೆ. ಆದರೆ, ಶಬರಿಮಲೆ ಬೆಟ್ಟದ ಮೇಲೆ ನೆಲೆಸಿರುವ ಅಯ್ಯಪ್ಪ ಕುರಿತ “ಹರಿವಾಸನಂ” ಗೀತೆ ಅಯ್ಯಪ್ಪ ಭಕ್ತರನ್ನು ಭಕ್ತಿಯ ಪರಾಕಾಷ್ಟೆಗೆ ಕೊಂಡೊಯ್ಯುವ ಗೀತೆಯಾಗಿದೆ, ಅಯ್ಯಪ್ಪ ಭಕ್ತರು ನಿತ್ಯವೂ ಪಠಿಸುವ ಪವಿತ್ರ ಗೀತೆ ಎಂಬ ಶ್ಲಾಘನೆಗೊಳಗಾಗಿದೆ. ಈ ಹಿನ್ನಲೆಯಲ್ಲಿ ಇಳಯರಾಜ ಅವರಿಗೆ “ಹರಿವರಾಸನಂ” ಪ್ರಶಸ್ತಿ ಲಭಿಸಿರುವುದು, ಶಬರಿಮಲೆಯಲ್ಲಿ ಅದನ್ನು ಅವರು ಪಡೆದುಕೊಳ್ಳುಲಿರುವುದು ಅತ್ಯಂತ ಮಹತ್ವ ಎಂದು ಪರಿಗಣಿಸಲಾಗಿದೆ.

Leave a Comment