ಇಲ್ಯಾಸ್ ಸಂಬಂಧ ಸಚಿವ ಖಾದರ್ ನಿರಾಕರಣೆ

ಧಾರವಾಡ, ಜ. ೧೩: ಅಪರಾಧಿಗಳನ್ನು ಯಾವತ್ತೂ ಬೆಂಬಲಿಸುವುದಿಲ್ಲ. ಕೊಲೆಯಾದ ಇಲ್ಯಾಸ್ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಲುವಾಗಿ ನನ್ನ ಬಳಿ ಬಂದಿದ್ದ. ಆದರೆ ಆತನನ್ನು ನಾನು ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.

ಇಲ್ಯಾಸ್ ಕ್ರಿಮಿನಲ್ ಹಿನ್ನೆಲೆಯನ್ನು ಗಮನಿಸಿ ನಾವು ಆತನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಆದರೆ ನಮಗೆ ಆಗದವರು ಯಾರೋ ಆನ್ ಲೈನ್ ಮುಖಾಂತರ ಆತನನ್ನು ಯುವ ಕಾಂಗ್ರೆಸ್ ಸದಸ್ಯನನ್ನಾಗಿ ಮಾಡಿದ್ದು ಬಳಿಕ ಆತ ಯುವ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಚುನಾವಣೆಯಲ್ಲಿ ಸೋತ ಬಳಿಕ ಉಪಾಧ್ಯಕ್ಷನಾಗಿದ್ದ. ನಾವು ಯಾವತ್ತೂ ಅಪರಾಧಿಗಳನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಧಾರವಾಡದಲ್ಲಿಂದು ಸಚಿವರು ಹೇಳಿದ್ದಾರೆ.

ತಪ್ಪು ಯಾರೇ ಮಾಡಿದರೂ ಸರ್ಕಾರ ಸಹಿಸುವುದಿಲ್ಲ. ಟಾರ್ಗೆಟ್ ಗ್ರೂಪ್ ಏನು ಮಾಡುತ್ತಿದೆ, ಈ ಹತ್ಯೆಯ ಹಿನ್ನೆಲೆಯೇನು, ಯಾರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುವುದನ್ನು ತಿಳಿದುಕೊಂಡು ಮುಂದಿನ ಕ್ರಮ ಜರಗಿಸಲಾಗುವುದು. ಅಶಾಂತಿ ಸೃಷ್ಟಿಸುವ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕೆಂದು ಅವರು ಒತ್ತಾಯಿಸಿದರು.

ಬಿಜೆಪಿ ರಾಜ್ಯಗಳಲ್ಲಿ ಅನ್ನಭಾಗ್ಯ ಇಲ್ಲ

ನಮ್ಮ ಸರ್ಕಾರದ ಅನ್ನ ಭಾಗ್ಯ ಯೋಜನೆಯನ್ನು ಮೊದಲು ಟೀಕಿಸುತ್ತಿದ್ದ ಬಿಜೆಪಿ ಈಗ ಅದು ನಮ್ಮ ಯೋಜನೆಯಂದು ಬಿಂಬಿಸಲು ಹೊರಟಿದೆ. ಬಿಜೆಪಿ ಆಡಳಿತವಿರುವ ಯಾವ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿ ಇದೆ ಎಂಬುದನ್ನು ಬಿಜೆಪಿಗರು ತೋರಿಸಿಕೊಡಲಿ ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಸವಾಲು ಹಾಕಿದರು.

 ಅನ್ನ ಭಾಗ್ಯ ಯೋಜನೆಯನ್ನು ತನ್ನದೆಂದು ಜನರ ಮುಂದೆ ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸಿದ್ಧರಾಮಯ್ಯನವರ ಮಹತ್ವಾಕಾಂಕ್ಷಿ ಹಾಗೂ ಬಡಜನಪರ ಯೋಜನೆಯಾಗಿದ್ದು, ಬಿಜೆಪಿ ಆಡಳಿತವಿರುವ ಛತ್ತೀಸಗಡ, ಗುಜರಾತ, ಮಧ್ಯಪ್ರದೇಶ ಸೇರಿದಂತೆ ಯಾವ ರಾಜ್ಯದಲ್ಲೂ ಅನ್ನ ಭಾಗ್ಯ ಯೋಜನೆ ಜಾರಿಯಿಲ್ಲ. ಇದ್ದರೆ ಬಿಜೆಪಿಗರು ತೋರಿಸಿಕೊಡಲಿ ಎಂದರು.

ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನೀಡುವುದರ ಕುರಿತಂತೆ ಕೇಂದ್ರ ಸರ್ಕಾರದ ನಿಯಮಾವಳಿ ತಡೆ ಹಿನ್ನೆಲೆ ನಿಯೋಗ ತೆಗೆದುಕೊಂಡು ಹೋಗಿ ಮನವಿ ಮಾಡಿಕೊಂಡಿದ್ದೇವೆ. ಆದರೆ ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಕೇಂದ್ರದಿಂದ ಪ್ರತಿಕ್ರಿಯೆ ಬಂದ ಬಳಿಕ ಮೆಕ್ಕೆಜೋಳ ಬೆಂಬಲ ಬೆಲೆ ಕುರಿತಂತೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದರು.

ಇನ್ನು ಗೋದಾಮಿನಲ್ಲಿರುವ ೨೦ ಸಾವಿರ ಕ್ವಿಂಟಲ್ ಗೋಧಿ ಹುಳು ಹಿಡಿದ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಈ ಗೋಧಿಯನ್ನು ಪ್ರಾಣಿಗಳಿಗೆ ಕೊಡಬೇಕೆ? ಅಥವಾ ಪ್ರಾಣಿಗಳಿಗೂ ಕೊಡಲಿಕ್ಕೂ ಯೋಗ್ಯವಿಲ್ಲವೋ? ಎಂಬುವುದನ್ನು ಪರೀಕ್ಷಿಸಿ ವರದಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Leave a Comment