ಇಮ್ರಾನ್ ಭೇಟಿಗೆ ಮೋದಿ ನಿರಾಸಕಿ

ಬಿಷ್ಕೆಕ್, ಜೂ. ೧೪- ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗ ಸಭೆಯ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ಅವರೊಂದಿಗೆ ಯಾವುದೇ ಚರ್ಚೆ ನಡೆಸದಿರಲು ಭಾರತ ನಿರ್ಧರಿಸಿದೆ.
ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ದೇಶದಲ್ಲಿ ನಿಲ್ಲಿಸದ ಹೊರತು ಆ ದೇಶದೊಂದಿಗೆ ಮಾತುಕತೆ ಅಸಾಧ್ಯ ಎಂದು ಕಡ್ಡಮುರಿದಂತೆ ಪ್ರಧಾನಿ ನರೇಂದ್ರಮೋದಿ ಚೀನಾ ಅಧ್ಯಕ್ಷರಿಗೆ ಹೇಳಿದ್ದಾರೆ.
ಶಾಂಘೈ ಸಹಕಾರ ಶೃಂಗಸಭೆಯ ಹಿನ್ನೆಲೆಯಲ್ಲಿ ನಿನ್ನೆ ಚೀನಾ ಅಧ್ಯಕ್ಷ ಝಿ ಜಿನ್‌ಪಿಂಗ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಈ ಸಂದೇಶ ರವಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಅವರೊಂದಿಗೂ ಮಾತುಕತೆ ನಡೆಸಿದರು.
ಇಂದು ಕಿರ್ಗಿಸ್ತಾನದ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಿರುವ ಪ್ರಧಾನಿ ನರೇಂದ್ರಮೋದಿ, ಬಳಿಕ ಇರಾನ್ ಅಧ್ಯಕ್ಷ ಹಸನ್‌ರೋಹಾನಿ ಅವರೊಂದಿಗೂ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಆದರೆ, ಪಾಕಿಸ್ತಾನದ ಪ್ರಧಾನಿಯೊಂದಿಗೆ ಯಾವುದೇ ಮಾತುಕತೆ ನಡೆಸದಿರಲು ನಿರ್ಧರಿಸಿದ್ದಾರೆ.
ಚೀನಾ ಮತ್ತು ಭಾರತ ನಡುವೆ ಸೌಹಾರ್ದಯುತ ಸಂಬಂಧವನ್ನು ಸುಧಾರಿಸಲು ಉಭಯ ದೇಶಗಳು ಪರಸ್ಪರ ಶ್ರಮಿಸಲಿವೆ ಎಂದು ಪ್ರಧಾನಿ ನರೇಂದ್ರಮೋದಿ ಹಾಗೂ ಚೀನಾ ಅಧ್ಯಕ್ಷ ಝಿ ಜಿನ್‌ಪಿಂಗ್ ಪರಸ್ಪರ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರಮೋದಿ, ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧ, ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.

Leave a Comment