ಇಮ್ರಾನ್ ಪಾಷಾ ವಿರುದ್ಧ ದೂರು ದಾಖಲು

ಬೆಂಗಳೂರು, ಮೇ.31 – ಕೊರೋನಾ ಸೋಂಕು ತಗುಲಿರುವ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಅವರ ಬೆಂಬಲಿಗರ ವಿರುದ್ಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ ಸಾಂಕ್ರಾಮಿಕ ರೋಗ ಹರಡಿಸಲು ಪ್ರಯತ್ನಿಸಿದ ಆರೋಪದ ಮೇಲೆ ಹಾಗೂ ಅಕ್ರಮವಾಗಿ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷಾ, ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೂತ ತಿಳಿಸಿದ್ದಾರೆ.
ಇಮ್ರಾನ್ ಪಾಷಾ ಅವರಿಗೆ ಶುಕ್ರವಾರ ರಾತ್ರಿ ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆ ಯಿಂದ ದೃಢಪಟ್ಟಿತ್ತು. ಆದರೂ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರಲಿಲ್ಲ, ಶನಿವಾರ ಅವರನ್ನು ಕರೆದೊಯ್ಯಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಆ್ಯಂಬುಲೆನ್ಸ್ ಸಮೇತ ಅವರ ಮನೆಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಅವರು ಮನೆಯಿಂದ ಹೊರಗೆ ಬರದೇ ಹೈಡ್ರಾಮಾ ಮಾಡಿದ್ದರು. ನಂತರ ಹೊರ ಬರಲು ತಡಮಾಡಿದ್ದಕ್ಕೆ ಅಲ್ಲಿಯೇ ನೂರಾರು ಜನ ಸೇರಿದ್ದರು. ಇನ್ನು, ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದರೂ ಇಮ್ರಾನ್ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪಿನ ಮಧ್ಯೆಯೇ ಇಮ್ರಾನ್ ಆ್ಯಂಬುಲೆನ್ಸ್ ಏರಿದ್ದರು. ಇದರಿಂದ ಸೋಂಕು ಇನ್ನಷ್ಟು ಹರಡುವ ಆತಂಕ ವ್ಯಕ್ತವಾಗಿದೆ

Share

Leave a Comment