ಇಬ್ಬರು ಮನೆಗಳ್ಳರ ಬಂಧನ: 6.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

ತಿಪಟೂರು, ನ. ೮- ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಸುಮಾರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಉದಯಕುಮಾರ್ (25), ಷಫಿ (32) ಎಂಬುವರೇ ಬಂಧಿತ ಆರೋಪಿಗಳು. ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಗುಡ್ಡದಪಾಳ್ಯ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯ ಬೀಗ ಹೊಡೆದು ಒಳನುಗ್ಗಿದ್ದ ಕಳ್ಳರು ಸುಮಾರು 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಕಿಬ್ಬನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.

ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥನ್ ಮಾರ್ಗದರ್ಶನದಲ್ಲಿ ತಿಪಟೂರು ಡಿವೈಎಸ್‌ಪಿ ಬಿ.ಎಲ್. ವೇಣುಗೋಪಾಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಿಪಟೂರು ಗ್ರಾಮಾಂತರ ಸಿಪಿಐ ಕೃಷ್ಣರಾಜು, ಪಿಎಸ್ಐ ರಾಮಪ್ರಸಾದ್, ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಎ ಎಸ್ಐ ನಾಗರಾಜು ಹಾಗೂ ಸಿಬ್ಬಂದಿಗಳಾದ ಮೆಹಬೂಬ್ ಪಾಷ, ಮಧುಸೂದನ್, ರಾಜೇಶ್, ಗೋಪಾಲ್, ರುದ್ರೇಶ್, ಶಾಂತಕುಮಾರ್, ಆನಂದಕುಮಾರ್, ನಾಗಭೂಷಣ್, ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿ ಜಿ. ರಮೇಶ್, ನರಸಿಂಹರಾಜು ತಂಡ ಆರೋಪಿಗಳ ಪತ್ತೆಗಾಗಿ ಶ್ರಮಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ತಾಲ್ಲೂಕಿನ ಗುಡ್ಡದಪಾಳ್ಯದ ಪ್ರಕರಣ, ಅಲ್ಲದೆ ತಿಪಟೂರಿನ ಹೌಸಿಂಗ್ ಬೋರ್ಡ್, ಹುಚ್ಚನಹಳ್ಳಿ ಗ್ರಾಮದ ದೇವಸ್ಥಾನದಲ್ಲಿನ ಕಳವು, ಮೂಗತಿಹಳ್ಳಿ, ಕರಡಿ ಗ್ರಾಮಗಳಲ್ಲಿ ದ್ವಿಚಕ್ರ ವಾಹನ ಕಳವು ಮತ್ತು ತುರುವೇಕೆರೆ ತಾಲ್ಲೂಕಿನ ದೊಡ್ಡಹಟ್ಟಿ, ಮುದ್ಲಾಪುರ, ಚನ್ನರಾಯಪಟ್ಟಣ, ಹರಳಾಪುರ ಗ್ರಾಮದ ಮನೆಗಳಲ್ಲಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಬಿ.ಎಲ್. ವೇಣುಗೋಪಾಲ್ ತಿಳಿಸಿದರು.

Leave a Comment