ಇನ್ಸ್‌ಪೆಕ್ಟರ್ ಬೆವರಿಳಿಸಿದ ಪೇದೆ

ಬೆಂಗಳೂರು,ಏ.೧೫- ಕರ್ತವ್ಯಕ್ಕೆ ತಡವಾಗಿ ಹಾಜರಾಗಿದ್ದಕ್ಕೆ ನೋಟಿಸ್ ನೀಡಿದ್ದ ಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಪೇದೆ ಶ್ರೀಧರ್‌ಗೌಡ ನೀಡಿರುವ ಉತ್ತರ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜಯನಗರ ಠಾಣಾ ವ್ಯಾಪ್ತಿಯ ಐವರು ಗಸ್ತು ಸಿಬ್ಬಂದಿ ಪ್ರತಿನಿತ್ಯ ತಡವಾಗಿ ಕೆಲಸಕ್ಕೆ ಬರುತ್ತಿರುವುದರ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಯರ್ರಿಸ್ವಾಮಿ ಅವರು  ನೋಟಿಸ್ ನೀಡಿದ್ದರು.

ಈ ನೋಟಿಸ್‌ಗೆ ಪ್ರತ್ಯುತ್ತರವಾಗಿ ಪೇದೆ ಶ್ರೀಧರ್‌ಗೌಡ ಅವರು ಉತ್ತರ ನೀಡಿ ಪತ್ರ ಬರೆದಿರುವುದು ಬಹಳಷ್ಟು ಸದ್ದು ಮಾಡುತ್ತಿದೆ.

ನಿಮ್ಮ ರೀತಿ ಬೆಳಗ್ಗೆ ಸುಖಸಾಗರ್ ಅಥವಾ ಯುಡಿ ಹೋಟೆಲ್‌ನಲ್ಲಿ ಟಿಫನ್, ಮಧ್ಯಾಹ್ನ ಖಾನಾವಳಿಯಲ್ಲಿ ಊಟ, ರಾತ್ರಿ ಎಂಪೈರ್‌ನಲ್ಲಿ ಊಟ, ಮಿಲನೋದಲ್ಲಿ ಐಸ್ ಕ್ರೀಂ ತಿಂದು ನಂತರ ಠಾಣೆಯ ಮೇಲಿರುವ ಕೊಠಡಿಯಲ್ಲಿ ವಾಸವಿದಿದ್ದರೆ ಬೆಳಗ್ಗೆ ೮.೩೦ಕ್ಕೆ ಅಲ್ಲ ೮ ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೆ.

ಆದರೆ ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ.ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಅವರ ಆಗು ಹೋಗುಗಳನ್ನು ಗಮನಿಸಿ ಠಾಣೆಗೆ ಬರಲು ತಡವಾಗುತ್ತಿದೆ. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಇರುವುದಿಲ್ಲ ಎಂದು ಉತ್ತರಿಸಿದ್ದಾರೆ.

Leave a Comment