ಇನ್ಫೋಸಿಸ್‌ ಫೌಂಡೇಶನ್‌ನಿಂದ ಸಿನೆಮಾ ಕಾರ್ಮಿಕರಿಗೆ ಆಹಾರ ಕಿಟ್

 

ಬೆಂಗಳೂರು, ಏ.19- ಕರೋನಾಲಾಕ್‌ಡೌನ್‌ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಸಾವಿರಾರು ಕಾರ್ಮಿಕರು ಹಾಗೂ ಕಲಾವಿದರ ನೆರವಿಗೆ  ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಮುಂದಾಗಿದ್ದಾರೆ.
ಸಿನಿಮಾ ಕಾರ್ಮಿಕರ 18 ಸಂಘಟನೆಗಳ ಸಹಯೋಗದಲ್ಲಿ ಕಾರ್ಮಿಕರುಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಇನ್ಫೋಸಿಸ್‌ ಫೌಂಡೇಶನ್‌ ವಿತರಿಸಲಿದ್ದು, ಈ ಕಾರ್ಯಕ್ಕೆ ನಗರದ ಬನಶಂಕರಿ ಪೋಸ್ಟ್‌ ಆಫೀಸ್‌ ಬಳಿಯಲ್ಲಿ ಚಾಲನೆ ನೀಡಲಾಯಿತು.
ನಿರ್ಮಾಪಕ ರಮೇಶ್‌ ರೆಡ್ಡಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಅಧ್ಯಕ್ಷರಾದ ಸಾ ರಾ ಗೋವಿಂದು, ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿ ಶಂಕರ್‌ ಸೇರಿದಂತೆ ಹಲವರು ಈ ಕಾರ್ಯಕ್ಕೆ ಚಾಲನೆನೀಡಿದರು.
ಇನ್ಪೋಸಿಸ್‌ ಫೌಂಡೇಷನ್‌ ವತಿಯಿಂದ ಇಂದು ಸಾಂಕೇತಿಕವಾಗಿ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳು ವಿತರಣೆಯ ಕಾರ್ಯವನ್ನು ಮುಂದುವರೆಸಲಿದ್ದಾರೆ.
ಸಾರಾ ಗೋವಿಂದು ಮಾತನಾಡಿ, 18 ಚಲನ ಚಿತ್ರ ಕಾರ್ಮಿಕ ಸಂಘಟನೆಗಳ ಅಡಿಯಲ್ಲಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕರೋನಾ ಕರ್ಪ್ಯೂದಿಂದಾಗಿ ಎಲ್ಲರ ಜೀವನ ತೊಂದರೆಗೆ ಸಿಲುಕಿದೆ. ಅವರ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ನೀಡಲು ಇನ್ಪೋಸಿಸ್‌ ಫೌಂಡೇಷನ್‌ ನ ಮುಖ್ಯಸ್ಥೆ ಸುಧಾಮೂರ್ತಿ ಅವರು  ಮುಂದಾಗಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ರವಿ ಶಂಕರ್‌, ಇನ್ಪೋಸಿಸ್‌ ಫೌಂಡೇಶನ್‌ ನ ಪ್ರಶಾಂತ್‌  ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Comment