ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ: ಸುರೇಶ್‌ಗೌಡ

ಕೊರಟಗೆರೆ, ಸೆ. ೧೧- ಇನ್ನೊಂದು ತಿಂಗಳಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಾಗೂ ಸಂಸದ ಮುದ್ದಹನುಮೇಗೌಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಖಳನಾಯಕರು ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.

ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಪ.ಪಂ. ನೂತನ ಸದಸ್ಯ ಪ್ರದೀಪ್‌ಕುಮಾರ್ ರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಪದವಿ ಪಡೆದ ದಿನದಿಂದ ರೈತರ ಬಗ್ಗೆ ನಾಟಕವಾಡುತ್ತಾ ಕುಟುಂಬದೊಂದಿಗೆ ದೇವಸ್ಥಾನ ಹಾಗೂ ಇತರೆ ಪ್ರದೇಶಗಳಿಗೆ ಪ್ರವಾಸ ಮಾಡಿಕೊಂಡಿದ್ದಾರೆ. ಅವರಿಗೆ ಸರ್ಕಾರದ ಬಗ್ಗೆ ಕಾಳಜಿ ಇಲ್ಲ. ಕೆಲಸ ಮಾಡುವ ಮನಸ್ಸಿಲ್ಲ. ಮುಂಬರುವ ದಿನಗಳಲ್ಲಿ ಈ ಸಮ್ಮಿಶ್ರ ಸರ್ಕಾರವು ಪತನವಾಗಲಿದ್ದು, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಂಸದ ಎಸ್.ಪಿ. ಮುದ್ದಹನುಮೇಗೌಡ ಜಿಲ್ಲೆಯಲ್ಲಿ ಕುತಂತ್ರದ ರಾಜಕಾರಣ ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚನ್ನಿಗಪ್ಪ ರವರೊಂದಿಗೆ ಕೈ ಜೋಡಿಸಿ ದುರ್ಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿ ಒಳಒಪ್ಪಂದ ಮಾಡಿಕೊಂಡು ಇಲ್ಲಿ ಮಾಜಿ ಶಾಸಕ ಸುಧಾಕರಲಾಲ್‌ಗೂ ಅನ್ಯಾಯ ಮಾಡಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಸೋಲಿಗೆ ಕುತಂತ್ರ ನಡೆಸಿದ್ದಾರೆ. ಇಷ್ಟೆ ಅಲ್ಲದೆ ಗುಬ್ಬಿ, ಸಿರಾ, ಮಧುಗಿರಿಗಳಲ್ಲೂ ಸಹ ಜೆಡಿಎಸ್ ಪಕ್ಷ ಗೆಲ್ಲಲು ಇಬ್ಬರು ಕಾಂಗ್ರೆಸ್ ಪಕ್ಷದವರನ್ನು ಬಲಿ ನೀಡಿದ್ದಾರೆ. ತಾವು ಉಪಮುಖ್ಯಮಂತ್ರಿ ಆಗಲು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿದ ಕೀರ್ತಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‍ಗೆ ಸಲ್ಲುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ, ಡಾ. ಜಿ. ಪರಮೇಶ್ವರ್ ಹೇಮಾವತಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸುವ ಪ್ರಯತ್ನ ಮಾಡಲಿಲ್ಲ. ಮತ್ತೊಬ್ಬ ಮಂತ್ರಿ ಶ್ರೀನಿವಾಸ್ ದೇವೆಗೌಡರ ಮನೆಯ ಗೇಟ್ ಕಾಯುತ್ತಾ ಕಾಲ ಕಳೆದರೆ, ಸಿರಾ ಶಾಸಕ ಸತ್ಯನಾರಾಯಣ ತೋಟದ ಮನೆಯಲ್ಲಿ ಆರಾಮಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಂದ ಜಿಲ್ಲೆಯ ಅಭಿವೃದ್ದಿ ಸಾಧ್ಯವೇ ಎಂದು ಪ್ರಶ್ನಿಸಿದರು.

ಡಾ.ಜಿ.ಪರಮೇಶ್ವರ್ ರವರನ್ನು ಗೆಲ್ಲಿಸಿದ ಕೊರಟಗೆರೆ ಜನತೆ ಈಗ ಪಶ್ಚಾತ್ತಾಪಪಡುತ್ತಿದ್ದಾರೆ. ಜನರ ಕೈಗೆ ಸಿಗದೆ ಬರುವಾಗ ಸುತ್ತಲು ಪೊಲೀಸರನ್ನು ಮತ್ತು ತಮ್ಮ ಹೊರಬಂಟರನ್ನು ತುಂಬಿಕೊಂಡು ಸಾಮಾನ್ಯ ಜನರು ಅಹವಾಲುಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಆಳಲು ತೋಡಿಕೊಳ್ಳುತ್ತಿದ್ದಾರೆ. ಡಾ.ಜಿ.ಪರಮೇಶ್ವರ್ ತಾವು ವೈಟ್ ಕಾಲರ್ ರಾಜಕಾರಣಿ ಎಂದು ಮತ್ತೊಮ್ಮೆ ಕೊರಟಗೆರೆ ಕ್ಷೇತ್ರದ ಜನತೆಗೆ ತೋರಿಸುತ್ತಿದ್ದಾರೆ ಎಂದರು.

ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತಷ್ಟು ಸಧೃಡಗೊಳಿಸಬೇಕಿದೆ. ಪ್ರಧಾನಿ ನರೇಂದ್ರಮೋದಿ ರವರ ಸಾಧನೆಯನ್ನು ಜನರಿಗೆ ತಿಳಿಸಬೇಕಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ಮಂತ್ರಿಗಳು, ಸಂಸದರು ಜನರ ಹಣ ಲೂಟಿ ಹೊಡೆದು ಜೈಲಿಗೆ ಹೋಗುವ ಸ್ಥಿತಿ ಇದ್ದರೆ ಮಾಜಿ ಪ್ರಧಾನಿ ದೇವೇಗೌಡ ಅವರ ಪರ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಪ್ರತಿನಿತ್ಯ ಬೇರೆಯವರಿಗೆ ಕಿತಾಪತಿಯನ್ನು ಮಾಡುವ ದೇವೆಗೌಡರು ರಾತ್ರಿ ಎಲ್ಲವೂ ಕೆಟ್ಟದನ್ನೇ ಯೋಜನೆ ಮಾಡಿ ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ದೇವೇಗೌಡರಂತಹ ನಂಬಿಕೆ ದ್ರೋಹಿ ಬೇರೊಬ್ಬರಿಲ್ಲ ಎಂದರು.

ನೂತನ ಪ.ಪಂ. ಸದಸ್ಯ ಪ್ರದೀಪ್‌ಕುಮಾರ್ ಮಾತನಾಡಿ, ಹಲವು ವರ್ಷಗಳಿಂದ ನಮ್ಮ ಕುಟುಂಬವು ಬಿಜೆಪಿ ಮತ್ತು ಆರ್ಎಸ್ಎಸ್‌ನಲ್ಲಿ ಸಕ್ರಿಯವಾಗಿ ಸೇವೆ ಮಾಡಿಕೊಂಡು ಬಂದಿದ್ದು, ಬಿಜೆಪಿ ಪಕ್ಷದಿಂದಲ್ಲೇ ನನ್ನ ತಂದೆ ಶಿವಕುಮಾರ್ ಹಲವು ಚುನಾವಣೆಗಳನ್ನು ಎದುರಿಸಿದ್ದರು. ಆದರೆ 11ನೇ ವಾರ್ಡ್ ಜನರು ನನ್ನ ಮೇಲೆ ನಂಬಿಕೆ ಇಟ್ಟು ತ್ರಿಕೋನ ಸ್ಫರ್ಧೆಯಲ್ಲಿ 103 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನನಗೆ ಮುಸ್ಲಿಂ ಭಾಂದವರು ಸಹ ಹೆಚ್ಚಿನ ಮತ ನೀಡಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು ವಾರ್ಡ್‌ನ್ನು ಅಭಿವೃದ್ದಿಗೆ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ತಾಲ್ಲೂಕು ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ, ಎಸ್‌ಟಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಪವನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment