ಇನ್ನೂ ಸಂಪೂರ್ಣ ಫಿಟ್‌ ಆಗಿಲ್ಲ: ಪೃಥ್ವಿ ಶಾ

ನವದೆಹಲಿ, ಜು 18- ಭಾರತ ತಂಡದ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕದ ಸಮಸ್ಯೆ ಎದುರಿಸುತ್ತಿರುವಾಗಲೇ ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಸೂಕ್ತ ಆರಂಭಿಕ ಬ್ಯಾಟ್ಸ್‌ಮನ್‌ ಆಯ್ಕೆ ಇದೀಗ ಬಿಸಿಸಿಐ ಆಯ್ಕೆ ಸಮಿತಿಗೆ ತಲೆಬಿಸಿ ಉಂಟು ಮಾಡಿದೆ.

ಕೆರಿಬಿಯನ್‌ ಪ್ರವಾಸದ ಏಕದಿನ, ಟಿ-20 ಹಾಗೂ ಟೆಸ್ಟ್‌ ಸರಣಿಗಳಿಗೆ ಭಾರತ ತಂಡವನ್ನು ನಾಳೆ(ಶುಕ್ರವಾರ) ಮುಂಬೈನಲ್ಲಿ ಬಿಸಿಸಿಐ ಪ್ರಕಟಿಸಲಿದೆ.
ಮುಂಬೈನ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರು ಸೊಂಟದ ಗಾಯದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಹಾಗಾಗಿ, ಇದೀಗ ಟೆಸ್ಟ್‌ ಆರಂಭಿಕ ಬ್ಯಾಟ್ಸ್‌ಮನ್‌ ಸಮಸ್ಯೆಯಾಗಿದೆ. 19ರ ಪ್ರಾಯದ ಪೃಥ್ವಿ ಶಾ ಇನ್ನೂ ಸಂಪೂರ್ಣ ಫಿಟ್‌ ಆಗಿಲ್ಲ.
“ಮುಂಬೈ ಪ್ರೀಮಿಯರ್‌ ಲೀಗ್‌(ಟಿ-20) ಫೈನಲ್ ಪಂದ್ಯದಲ್ಲಿ ಸೊಂಟದ ಗಾಯಕ್ಕೆ ಒಳಗಾಗಿದ್ದೆ. ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಸಂಪೂರ್ಣ ಪರಿಪೂರ್ಣನಾಗುತ್ತೇನೆ ಎಂದು ಪೃಥ್ವಿ ಶಾ ಹೇಳಿದ್ದಾರೆ.
ಆಗಸ್ಟ್‌ 3ರಿಂದ ವೆಸ್ಟ್ ಇಂಡೀಸ್‌ ಪ್ರವಾಸ ಆರಂಭವಾಗಲಿದ್ದು, ಇನ್ನೂ ಎರಡು ವಾರಗಳಿಗೂ ಹೆಚ್ಚು ಸಮಯವಿದೆ. ಹಾಗಾಗಿ, ನಾನು ತರಬೇತಿಯನ್ನು ಆರಂಭಿಸುತ್ತೇನೆ ಎಂದು 19 ವಯೋಮಿತಿ ವಿಶ್ವಕಪ್‌ ವಿಜೇತ ಭಾರತ ತಂಡದ ನಾಯಕ ತಿಳಿಸಿದ್ದಾರೆ.

ವಿಶ್ವಕಪ್‌ ಟೂರ್ನಿಯಲ್ಲಿ ಎಡಗೈ ಹೆಬ್ಬೆರಳು ಗಾಯಕ್ಕೆ ಒಳಗಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರ ಚೇತರಿಕೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಬೆಂಗಳೂರಿನಲ್ಲಿರುವ ಎನ್‌ಸಿಎನಲ್ಲಿ ಎಡಗೈ ಬ್ಯಾಟ್ಸ್‌ಮನ್‌ ಗಾಯದಿಂದ ಚೇತರಿಕೆ ಕಾರ್ಯವಿಧಾನದಲ್ಲಿ ತೊಡಗಿದ್ದಾರೆ.
” ಸದ್ಯ ಸಂಪೂರ್ಣ ಫಿಟ್ನೆಸ್‌ಗೆ ಮರಳಲು ಪ್ರಯತ್ನ ನಡೆಸುತ್ತಿದ್ದೇನೆ. ಆದರೆ, ಯಾವಾಗ ಫಿಟ್‌ ಆಗುತ್ತೇನೆಂದು ದಿನಾಂಕ ನೀಡಲಾಗುವುದಿಲ್ಲ. ಫಿಟ್‌ ಆದ ಬಳಿಕ ಆಯ್ಕೆದಾರರ ಹಾಗೂ ಟೀಮ್‌ ಮ್ಯಾನೇಜ್‌ಮೆಂಟ್‌ ಬಳಿ ಮಾತನಾಡುತ್ತೇನೆ” ಎಂದು ಪೃಥ್ವಿ ಶಾ ಮಾಹಿತಿ ನೀಡಿದ್ದಾರೆ.

Leave a Comment