ಇನ್ನೂ ಧಗಧಗಿಸುತ್ತಿರುವ ದೆಹಲಿ: ಮೃತರ ಸಂಖ್ಯೆ 35ಕ್ಕೆ ಏರಿಕೆ

ನವದೆಹಲಿ, ಫೆ. ೨೭- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಕಳೆದ ನಾಲ್ಕು ದಿನಗಳಿಂದ ಕೋಮು ದಳ್ಳುರಿಗೆ ಈಡಾಗಿರುವ ಈಶಾನ್ಯ ದೆಹಲಿಯ ಹಲವೆಡೆ ಅಗ್ನಿಕುಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಭಯಭೀತರಾಗಿದ್ದಾರೆ. ಇದುವರೆಗೂ ನಡೆದ ಹಿಂಸಾತ್ಮಕ ಕೃತ್ಯಗಳಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೇರಿದ್ದು, ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರು ಜೀವನ್ಮರಣದ ಜೊತೆ ಹೋರಾಟ ನಡೆಸುತ್ತಿದ್ದಾರೆ. ಈಶಾನ್ಯ ದೆಹಲಿಯ ಮೌಸ್‌ಪುರ, ಜಫ್ರಾಬಾದ್, ಚಾಂದ್ ಭಾಗ್ ಹಾಗೂ ಅದಕ್ಕೆ ಹೊಂದಿಕೊಂಡಂತಹ ಪ್ರದೇಶಗಳ ನಿವಾಸಿಗಳು ಮನೆಗಳಿಂದ ಹೊರಬರಲು ಹಿಂದು-ಮುಂದು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಈ ಎಲ್ಲಾ ಪ್ರದೇಶಗಳಲ್ಲಿ ಮಾರ್ಚ್ 24ರವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇಡೀ ಪ್ರದೇಶವನ್ನು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದು, ಎಲ್ಲರ ಚಲನ-ವಲನಗಳ ಬಗ್ಗೆ ನಿಗಾವಹಿಸಿದ್ದಾರೆ.

ದೆಹಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿ, ಧ್ವಜಪಥ ಸಂಚಲನ ನಡೆಸುವ ಮೂಲಕ ಜನರು ಶಾಂತಿ, ಸಹಬಾಳ್ವೆ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಇದುವರೆಗೂ ಹಿಂಸಾತ್ಮಕ ಘಟನೆಗಳ ಕುರಿತು, 18 ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದು, 100ಕ್ಕೂ ಹೆಚ್ಚುಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದ ದುಷ್ಕರ್ಮಿಗಳು ಹಾದಿಬೀದಿಗಳಲ್ಲಿ ಕಂಡಕಂಡ ವಾಹನಗಳಿಗೆಲ್ಲಾ ಬೆಂಕಿಹಚ್ಚಿ ತಮ್ಮ ರಾಕ್ಷಸತ್ವವನ್ನು ಮೆರೆದಿದ್ದಾರೆ. ಅಂಗಡಿ – ಮುಂಗಟ್ಟುಗಳು, ವಸತಿ ಪ್ರದೇಶಗಳ ಮನೆಗಳಿಗೆ ನುಗ್ಗಿ ಲೂಟಿ ನಡೆಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಶಾಂತಿ ಕಾಪಾಡುವಂತೆ ದೆಹಲಿ ಜನತೆಗೆ ಮನವಿ ಮಾಡಿದ್ದಾರೆ. ಆದರೂ ಜನರಲ್ಲಿನ ಭಯದ ವಾತಾವರಣ ಸದ್ಯಕ್ಕೆ ದೂರವಾಗಿಲ್ಲ. ಹಿಂಸಾತ್ಮಕ ಘಟನೆಗಳು ಏಕೆ ನಡೆಯುತ್ತಿವೆ ಎಂಬುದೇ ಸ್ಥಳೀಯರಿಗೆ ಅರ್ಥವಾಗದ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಈ ನಡುವೆ ದಿಢೀರ್ ಬೆಳವಣಿಗೆಯೊಂದರಲ್ಲಿ ದೆಹಲಿಯಲ್ಲಿ ಮತ್ತೊಮ್ಮೆ 1984ರ ಸಿಖ್ ದಂಗೆಯನ್ನು ಮರುಕಳಿಸುವಂತೆ ಮಾಡಬೇಡಿ ಎಂದು ಹೇಳಿದ್ದ ದೆಹಲಿಯ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ಮುರಳಿಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.

ಈ ಬೆಳವಣಿಗೆ ಕುರಿತು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ನ್ಯಾಯಮೂರ್ತಿ ಮುರಳಿಧರ್ ಅವರನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

Leave a Comment