ಇನ್ನು ಮುಂದೆ ಮ್ಯೂಸಿಕ್ ಗೆ ಹೆಚ್ಚು ಸಮಯ ಮೀಸಲು: ಸಾಧು ಕೋಕಿಲ

ಬೆಂಗಳೂರು, ಜೂನ್ 14 – ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಸಾಧು ಕೋಕಿಲ ಅತ್ಯದ್ಭುತ ಸಂಗೀತ ಸಂಯೋಜಕ ಎಂಬುದು ಎಲ್ಲರಿಗೂ ತಿಳಿದಿದೆ. ಅತ್ಯುತ್ತಮವಾದ ಮ್ಯೂಸಿಕ್ ಸ್ಟುಡಿಯೋ ನಿರ್ಮಾಣದ ಇವರ ಹಲವು ವರ್ಷಗಳ ಕನಸು ಇದೀಗ ನನಸಾಗಿದೆ.

ಹೌದು, ಇಂದು ಬೆಂಗಳೂರಿನ ನಾಗರಬಾವಿಯಲ್ಲಿ ‘ಲೂಪ್’ ಹೆಸರಿನ ಮ್ಯೂಸಿಕ್ ಸ್ಟುಡಿಯೋ ನಿರ್ಮಿಸಿದ್ದು, ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಾಧು ಕೋಕಿಲ, “ನಟನೆಗಿಂತಲೂ ಸಂಗೀತಕ್ಕೆ ಹೆಚ್ಚು ಸಮಯ ನೀಡುವಂತೆ ಭೇಟಿಯಾದಗಲೆಲ್ಲ ಸಲಹೆ ನೀಡುತ್ತಿದ್ದರು. ಅದನ್ನು ಸ್ವೀಕರಿಸಿದ್ದೇನೆ. ಇನ್ನು ಮುಂದೆ 24 ಗಂಟೆಗಳಲ್ಲಿ ಸಂಗೀತಕ್ಕೆ ಹೆಚ್ಚು ಸಮಯ ನೀಡುತ್ತೇನೆ” ಎಂದು ಹೇಳಿದರು.

“ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಎಸ್ ಪಿ ಬಾಲಸುಬ್ರಮಣ್ಯಂ ಅವರ ಕೈನಿಂದಲೇ ಸ್ಟುಡಿಯೋದ ಉದ್ಘಾಟನೆಯಾಗಿದೆ. ಈ ಅನುಭವವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಅವರು ಹಾಡಿರುವ ಸಹಸ್ರಾರು ಹಾಡುಗಳಲ್ಲಿ ಕನ್ನಡದ ಹಾಡುಗಳ ಸಂಖ್ಯೆಯೇ ಹೆಚ್ಚು. ಈ ನೂತನ ಸ್ಟುಡಿಯೋ ಇನ್ನು ಮುಂದೆ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆಯಾಗಲಿದೆ ಎಂದು ಸಾಧು ಕೋಕಿಲ ತಿಳಿಸಿದರು.

“ಜೀವನಕ್ಕೆ ಬೇಕಾಗಿ ಅಭಿನಯ ಕ್ಷೇತ್ರವನ್ನು ಆಯ್ದುಕೊಂಡೆನಾದರೂ, ಇಷ್ಟು ವರ್ಷ ನಟನೆಯ ಜೊತೆಗೆ ಸಂಗೀತವನ್ನೂ ಮುಂದುವರಿಸಿದೆ. ಆದರೆ ಇನ್ನು ಮುಂದೆ ಸಂಗೀತಕ್ಕೇ ನನ್ನ ಪ್ರಾಶಸ್ತ್ಯ. ಈ ನೂತನ ಸ್ಟುಡಿಯೋ ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಳೆಯಬೇಕಿದ್ದು, ಸಂಗೀತಾಭಿಮಾನಿಗಳ ಪ್ರೋತ್ಸಾಹ ಅಗತ್ಯ”ಎಂದರು.

Leave a Comment