ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಆನಂದ್ ಸಿಂಗ್

ಹೊಸಪೇಟೆ,ಸೆ.6: ಇನ್ನು ಮುಂದೆ ಚುನಾವಣೆಯಲ್ಲಿ ನಾನು ಸ್ಪರ್ಧೆಮಾಡುವುದಿಲ್ಲ, ಆದರೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಮುಂದುವರೆಯುತ್ತೇನೆ ಎಂದು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಘೋಷಣೆ ಮಾಡಿದ್ದಾರೆ.

ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಬುಧವಾರ ಮಾತನಾಡಿದರು.

ನಾನು ಎರಡು ಬಾರಿ ಶಾಸಕನಾದ ಮೇಲೆ ಮೂರನೇ ಬಾರಿಯೂ ಶಾಸಕನಾಗಬೇಕು ಎಂಬ ಪಣತೊಟ್ಟಿದ್ದೆ ಅದನ್ನು ಮತದಾರರು ಈಡೇರಿಸಿದ್ದಾರೆ. ನನ್ನನ್ನು ವಿಜಯನಗರ ಕ್ಷೇತ್ರದಿಂದ ಮತದಾರರು ಸತತ ಮೂರು ಬಾರಿ ಶಾಸಕನಾಗಿ ಆಯ್ಕೆಮಾಡಿದ್ದಾರೆ. ಅವರ ಋಣ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಮಾಡದಿರಲು ನಿರ್ಧಾರಿಸಿರುವೆ. ಇದರಲ್ಲಿ ಯಾವುದೇ ಸ್ವಹಿತಾಸಕ್ತಿ ಇಲ್ಲ, ಈ ಅವಧಿಗೆ ಮಾತ್ರ ಶಾಸಕನಾಗಿ ಮುಂದುವರೆಯುವೆ ಎಂದರು.

ಸಮಾರಂಭದಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ಕಂಪ್ಲಿ ಕ್ಷೇತ್ರದ ಜನ ಬದಲಾವಣೆ ಬಯಸಿ ನನ್ನನ್ನು ಆಯ್ಕೆಮಾಡಿದ್ದಾರೆ. ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಲಾಗುವುದು ಎಂದರು.

ಸಮಾರಂಭಕ್ಕೂ ಮುನ್ನ ನಗರದ ವಾಲ್ಮೀಕಿ ವೃತ್ತದಿಂದ ಶಾಸಕರಾದ ಆನಂದ್‍ಸಿಂಗ್, ಜೆ.ಎನ್. ಗಣೇಶ್‍ರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.

ನಗರಸಭೆ ಅಧ್ಯಕ್ಷ ಗುಜ್ಜಲ್ ನಿಂಗಪ್ಪ, ಸದಸ್ಯರಾದ ಶ್ರೀಧರ್‍ನಾಯ್ಡು, ರಾಮಕೃಷ್ಣ, ಬಸವರಾಜ, ರೂಪೇಶ್, ಅಂಜಿನಪ್ಪ, ಬಡಾವಲಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ, ಮಾಜಿ ಶಾಸಕರಾದ ಗುಜ್ಜಲ್ ಜಯಲಕ್ಷ್ಮೀ, ರತನ್ ಸಿಂಗ್ ಮುಂತಾದವರಿದ್ದರು.

Leave a Comment