ಇದು ರಾಗಿಣಿ ಗುಮ್ಮಿದ್ರೆ ಹುಲಿ

ಚಿತ್ರ : ವೀರ ರಣಚಂಡಿ
ನಿರ್ಮಾಪಕ : ವಿ. ಕುಪ್ಪಸ್ವಾಮಿ
ನಿರ್ದೇಶಕ : ಆನಂದ್ ಪಿ ರಾಜು
ತಾರಾಗಣ : ರಾಗಿಣಿ ದ್ವಿವೇದಿ, ರಮೇಶ್ ಭಟ್, ಪದ್ಮಜಾ ರಾವ್, ಶೋಭರಾಜ್,
ರೇಟಿಂಗ್ : ***

ನಾಯಕಿ ಪ್ರಧಾನ ಆಕ್ಷನ್ ಚಿತ್ರ ವೀರ ರಣಚಂಡಿ. ಹೀರೋಯಿಂಸಂ ಚಿತ್ರಗಳಂತೆ ಇಲ್ಲಿ ನಾಯಕಿ ರಾಗಿಣಿಗೆ ಬಿಲ್ಡಪ್ ಇದೆ, ಪಂಚಿಂಗ್ ಡೈಲಾಗ್ಸ್, ಫೈಟ್ಸ್, ಸಾಂಗ್ಸ್ ಇದೆ. ಅದಕ್ಕೆ ತಕ್ಕಂತೆ ರಾಗಿಣಿ ಕಾಣಿಸಿಕೊಂಡಿದ್ದಾರೆ ಆಕ್ಷನ್‌ಗೆ ಇಳಿದಾಗ ಪ್ರೇಕ್ಷರಿಂದ ಸಿಳ್ಳೆಗಿಟ್ಟಿಸುತ್ತಾರೆ.
ಬೆಂಗಳೂರಿನ ಭೂಗತ ಜಗತ್ತಿನ ದೊರೆಯ ತಂಗಿಯಾಗಿ ಅಣ್ಣನನ್ನು ಮೀರಿಸುವಂಥ ತನ್ನನ್ನು ತಾನು ಹುಲಿ ಎಂದು ಕರೆದುಕೊಳ್ಳುವ ಲೇಡಿಡಾನ್ ಆಗಿರುತ್ತಾಳೆ ರಾಗಿಣಿ. ಇವರು ತಮ್ಮ ಎದುರಾಳಿ ಮತ್ತೊಬ್ಬ ಡಾನ್ ಪ್ಲಾನ್ ಮಾಡಿ ದೋಚಿದ್ದನ್ನು ಕುತಂತ್ರದಿಂದ ತಮ್ಮದಾಗಿಸಿಕೊಳ್ಳುತ್ತಿರುತ್ತಾರೆ. ಕೊನೆಗೆ ಆ ಡಾನ್ ಇವರೊಂದಿಗೆ ಹೊಂದಿಕೆ ಮಾಡಿಕೊಳ್ಳಲು ಬರುತ್ತಾನೆ. ಆದರೆ ಮೋಸ ಮಾಡಿ ಅಣ್ಣನನ್ನು ಕೊಲ್ಲುತ್ತಾನೆ ರಾಗಿಣಿಗೂ ಸಾಯುವಂತೆ ಹೊಡೆದು ಬಹುಮಹಡಿ ಕಟ್ಟಡದ ಮೇಲಿನಿಂದ ತಳ್ಳಲಾಗುತ್ತದೆ. ಆದರೆ ರಾಗಿಣಿ ಸಾಯುವುದಿಲ್ಲ ಲಾರಿ ಮೇಲೆ ಬೀಳುತ್ತಾಳೆ ಅಲ್ಲಿಂದ ತರಕಾರಿ ಸಾಗಿಸುವ ಟ್ರ್ಯಾಕ್ಟರ್ ಮೇಲೆ ತಳ್ಳಲ್ಪಡುತ್ತಾಳೆ. ಅದನ್ನು ಓಡಿಸುತ್ತಿದ್ದ ಆಳುಮಗ ಅವಳನ್ನು ಆಸ್ಪತ್ರೆಗೆ ಸೇರಿಸುತ್ತಾನೆ ಅಲ್ಲಿ ಅವಳ ಬೆನ್ನಿನ ಮೇಲಿದ್ದ ನಂದಿಯ ಟಾಟೂ ನೋಡಿ ಅವಳು ೧೬ ವರ್ಷದ ಹಿಂದೆ ಜಾತ್ರೆ ಸಮಯದಲ್ಲಿ ನಾಪತ್ತೆಯಾದ ತನ್ನ ಒಡೆಯ ಮಾನಪ್ಪ ಗೌಡರ ಮಗಳೆಂದು ತಿಳಿಸುತ್ತಾನೆ. ರಾಗಿಣಿ ಮಗಳಾಗಿ ಆ ಮನೆ ಸೇರುವಂತಾಗಿ ಆಶ್ರಯ ದೊರೆತರೆ, ಏಕೈಕ ಮಗಳನ್ನು ಕಳೆದುಕೊಂಡು ನೊಂದಿದ್ದ ಅಪ್ಪ-ಅಮ್ಮನಿಗೆ ಮಗಳು ಸಿಗುತ್ತಾಳೆ. ಭೂಗತ ಜಗತ್ತಿನ ಕ್ರೌರ್ಯವನ್ನೇ ನೋಡಿ ಬೆಳೆದಿದ್ದ ರಾಗಿಣಿಗೆ ಇಂಥ ಸಂಬಂಧ, ಪ್ರೀತಿ, ಬಾಂಧವ್ಯ ಗೊತ್ತಿರುವುದಿಲ್ಲ. ಅಲ್ಲಿಂದ ಕಥೆ ಬೇರೆಯೇ ತಿರುವನ್ನು ತೆಗೆದುಕೊಂಡು ಹಳ್ಳಿಯತ್ತ ಹೊರಳಿಕೊಳ್ಳುತ್ತದೆ. ಮಾನಪ್ಪಗೌಡನ ವಂಶವನ್ನೇ ನಾಶಮಾಡಿ ಆಸ್ತಿ ತನ್ನದಾಗಿಸಿಕೊಳ್ಳಬೇಕೆನ್ನುವ ನಂಜೇಗೌಡನಿಂದ ಅಪ್ಪ-ಅಮ್ಮನನ್ನು ಉಳಿಸುವ ಜೊತೆಗೆ ಹಳ್ಳಿಗೆ ಒಳ್ಳೆಯದನ್ನು ಮಾಡಲು ರಾಗಿಣಿಯಿಂದ ನಂದಿನಿಯಾಗಿ ವೀರ ರಣಚಂಡಿಯಾಗಿ ಶತ್ರು ಸಂಹಾರ ಮಾಡುತ್ತಾಳೆ.
ರಾಗಿಣಗೆ ಆಕ್ಷನ್ ಕ್ವೀನ್ ಎನ್ನುವ ಬಿರುದುಕೊಟ್ಟು ನಿರ್ದೇಶಕ ಆನಂದ್ ಪಿ ರಾಜು ಹೀರೋಗಳನ್ನು ಮೀರಿಸುವಂತೆ ಅವಳಿಂದ ಸಾಹಸ ಮಾಡಿಸಿದ್ದಾರೆ, ಕಾಮೆರಾದ ಪ್ರತಿ ಆಂಗಲ್‌ನಲ್ಲೂ ಹೀರೋನಂತೆ ಚಿತ್ರಿಸಿದ್ದಾರೆ. ಈ ವಿಚಾರದಲ್ಲಿ ರಾಗಿಣಿಯನ್ನು ಮೆಚ್ಚಲೇಬೇಕು ಆಕ್ಷನ್‌ನಲ್ಲಿ ಯಾವ ಹೀರೋಗೂ ಕಮ್ಮಿ ಇಲ್ಲದಂತೆ ಕಾಣಿಸಿಕೊಂಡಿದ್ದಾರೆ. ಮಾಸ್ ಮಾದ ಸಾಹಸ ನಿರ್ದೇಶನ ಮತ್ತು ಎಸ್.ಪಿ. ವೆಂಕಟೇಶ್ ಸಂಗೀತ ನಿರ್ದೇಶನ ನಾಯಕಿಗೆ ಹೀರೋಯಿಸಂನ ಕಳೆ ಕಟ್ಟಿಕೊಟ್ಟಿವೆ. ರಣಚಂಡಿಯನ್ನು ಪಕ್ಕಾ ಕಮರ್ಷಿಯಲ್ ಮಸಾಲ ರಂಜನೆಯಾಗಿ ಕಟ್ಟಿಕೊಟ್ಟಿದ್ದಾರೆ ಆನಂದ್ ಪಿ. ರಾಜು.
– ಕೆ.ಬಿ. ಪಂಕಜ

Leave a Comment