ಇಡಿ ಮುಂದೆ ಡಿಕೆಶಿ ಪುತ್ರಿ ಹಾಜರು

ನವದೆಹಲಿ, ಸೆ. ೧೨- ಅಕ್ರಮ ಹಣ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿನಿರ್ದೇಶನಾಲಯ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಇಂದು ವಿಚಾರಣೆಗೆ ಹಾಜರಾದರು.

ಬೆಳಿಗ್ಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ತಾಯಿ ಸುಮಾ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಅವರೊಂದಿಗೆ ಆಗಮಿಸಿ ಅಧಿಕಾರಿಗಳ ವಿಚಾರಣೆ ಎದುರಿಸಿದರು. ಅಧಿಕಾರಿಗಳು ಕೇಳಬಹುದಾದ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳೊಂದಿಗೆ ದಾಖಲಾತಿಗಳನ್ನೂ ಐಶ್ವರ್ಯ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

2017ರಲ್ಲಿ ತಂದೆ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ ವಿಷಯದ ಕುರಿತಂತೆಯೂ ಅವರು ಅಧಿಕಾರಿಗಳ ಮುಂದೆ ಸಮಗ್ರ ಮಾಹಿತಿ ನೀಡಿದ್ದಾರೆ.

ಅಗರಿ ಬೊಮ್ಮನಹಳ್ಳಿಯ ಸೋಲಾರ್ ಪ್ಲಾಂಟ್ ಸೋಲ್ ಆಂಡ್ ಸೇಲ್ಸ್, ಸೋಲ್ ಅರೆನಾ ಮಾಲ್‌ನಲ್ಲಿ ಪಾಲುಗಾರಿಕೆ, ಬೆಂಗಳೂರಿನ ಉತ್ತರ ಹಳ್ಳಿಯಲ್ಲಿ ಅಜ್ಜಿಯಿಂದ ಬಂದ 3 ಎಕರೆ ಗಿಫ್ಟ್‌ಡೀಡ್, ಆರ್‌ಆರ್ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ, ನ್ಯಾಷನಲ್ ಹಿಲ್ ವ್ಯೂನಲ್ಲಿ ಪಾತ್ರ, ಶ್ರೀರಾಮ್ ಫೈನಾನ್ಸ್‌ನಲ್ಲಿರುವ ಪಾಲುದಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಐಶ್ವರ್ಯ ಅವರನ್ನು ಅಧಿಕಾರಿಗಳು ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‌ಗೆ ಡಿ.ಕೆ. ಶಿವಕುಮಾರ್ ಸರಿಯಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ, ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಐಶ್ವರ್ಯ ಅವರ ಉತ್ತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತೃಪ್ತಿ ತರದಿದ್ದರೆ ಏನು ಮಾಡಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ. ಸೆ. 3 ರಂದು ಜಾರಿ ನಿರ್ದೇಶನಾಲಯ ಶಿವಕುಮಾರ್ ಅವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.

ಡಿ.ಕೆ. ಶಿವಕುಮಾರ್ ಅವರ ನಿವಾಸ-ಕಚೇರಿ ಸೇರಿದಂತೆ ಅವರ ಆಸ್ತಿ-ಪಾಸ್ತಿಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು. ಈ ಸಂಬಂಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Leave a Comment