ಇಡಿ ಪ್ರಶ್ನೆಗಳಿಗೆ ಮಾಹಿತಿ ನೀಡುವೆ: ಕೆ.ಎನ್. ರಾಜಣ್ಣ

ನವದೆಹಲಿ, ಅ ೧೬- ಬ್ಯಾಂಕ್ ವ್ಯವಹಾರ, ಸಾಲ ನೀಡಿರುವ ಮಾಹಿತಿಯ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏನೇ ಮಾಹಿತಿ ಕೇಳಿದರೂ ಅದನ್ನು ನೀಡುತ್ತೇನೆ. ಬ್ಯಾಂಕಿನ ಎಲ್ಲ ವ್ಯವಹಾರಗಳು ಪಾರದರ್ಶಕವಾಗಿದೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಲವರಿಗೆ ಬ್ಯಾಂಕ್ ನಿಂದ ಸಾಲ ನೀಡಲಾಗಿದೆ. ಬ್ಯಾಂಕ್ ನಲ್ಲಿ ಯಾರು ಯಾರು ಖಾತೆ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಕೇಳಿದರೆ ಎಲ್ಲವನ್ನು ನೀಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಸಾಲ ನೀಡುವ ಅಧಿಕಾರವನ್ನು ಬ್ಯಾಂಕ್ ಹೊಂದಿದ್ದು ಕಾನೂನು ನಿಯಮದ ಅಡಿಯಲ್ಲಿ ಸಾಲವನ್ನು ನೀಡಲಾಗಿದೆ. ಹಾಗಾಗಿ ಎಲ್ಲಿಯೂ ಸಾಲದ ದುರ್ಬಳಕೆ ಆಗಿಲ್ಲ. ದುರುಪಯೋಗ ಆಗಿದ್ದರೇ ಚಿಂತೆ ಮಾಡಬೇಕು. ಆ ಚಿಂತೆ ನನಗಿಲ್ಲ ಎಂದು ಅವರು ಹೇಳಿದರು.
ನಬಾರ್ಡ್, ಆರ್.ಬಿ.ಐ. ಪ್ರತಿವರ್ಷ ಸಾಲ ಕುರಿತ ಮಾಹಿತಿ ಬಗ್ಗೆ ಪರಿಶೀಲನೆ ನಡೆಸುತ್ತದೆ. ಒಂದು ವೇಳೆ ಸಾಲ ನೀಡಿಕೆಯಲ್ಲಿ ದುರುಪಯೋಗವಾಗಿದ್ದಲ್ಲಿ ನಮ್ಮ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಅವರು ತಿಳಿಸಿದರು.
ಅಕ್ರಮ ಹಣ ಗಳಿಕೆ ಬಗ್ಗೆ ಹಣದ ಲೇವಾದೇವಿ ವಿಚಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ.ಶಿವಕುಮಾರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಈಗಾಗಲೇ 180ಕ್ಕೂ ಹೆಚ್ಚು ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಡಿ.ಸಿ.ಸಿ. ಬ್ಯಾಂಕ್ ನ ಅವ್ಯವಹಾರದಲ್ಲಿ ಹೆಸರು ತಳಕುಹಾಕಿಕೊಂಡಿದ್ದ ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರಿಗೂ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರಿಂದ ರಾಜಣ್ಣ ಅವರು ನವದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಅಪೆಕ್ಸ್ ಬ್ಯಾಂಕ್ ಇರುವುದೇ ಸಾಲ ಕೊಡಲಿಕ್ಕಾಗಿ, ಇದು ನಮ್ಮ ಕೆಲಸ, ಲಕ್ಷ್ಮಿ ಹೆಬ್ಬಾಳ್ಕರ್ ಇರಲಿ ಅಥವಾ ಬೇರೆ ಯಾರೇ ಇರಲಿ, ಸಾಲ ಕೊಡುತ್ತೇವೆ. ಇದುವರೆಗೂ ನಾವು ಸಾಲ ಕೊಟ್ಟಿರುವ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವ ಮುನ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ರಾಜಣ್ಣ, ಕಳೆದ ವಿಚಾರಣೆ ಸಂದರ್ಭದಲ್ಲಿ ಸಾಲ ನೀಡಿಕೆ ಸಂಬಂಧ ಕಾಗದ – ಪತ್ರಗಳನ್ನು ಕೇಳಿದ್ದಾರೆ. ಅವುಗಳನ್ನು ಒದಗಿಸುವುದು ನಮ್ಮ ಧರ್ಮ. ಇಡಿ ಅಧಿಕಾರಿಗಳ ಸೂಚನೆಯಂತೆ ನಡೆದುಕೊಳ್ಳುವುದಾಗಿ ಹೇಳಿದರು.
ಜಾರಿ ನಿರ್ದೇಶನಾಲಯದ ಸಮನ್ಸ್ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ರಾಜಣ್ಣ ಈಗಾಗಲೇ ಒಮ್ಮೆ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.

 

 

Leave a Comment