ಇಎಸ್ಐ ಆಸ್ಪತ್ರೆ, ಪಾರ್ಸ್ ಪೋರ್ಟ್ ಕೇಂದ್ರ ಮಂಜೂರು ಕೇಂದ್ರ ಸಚಿವರುಗಳಿಗೆ ಸಂಸದ ಶ್ರೀರಾಮುಲು ಕೃತಜ್ಞತೆ

ಬಳ್ಳಾರಿ, ಜೂ.19: ಬಳ್ಳಾರಿ ಜಿಲ್ಲೆಯ ಕಾರ್ಮಿಕರ ಬಹು ವರ್ಷಗಳ ಬೇಡಿಕೆಯು ನೂರು ಹಾಸಿಗೆಗಳ ಇಎಸ್ಐ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಹಾಗೂ ಜಿಲ್ಲೆಯ ನಾಗರೀಕರ ಕನಸಾದ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಬಳ್ಳಾರಿಯಲ್ಲಿ ಪ್ರಾರಂಭಿಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಸಚಿವರಿಗೆ ಬಳ್ಳಾರಿಯ ಸಂಸದ ಬಿ.ಶ್ರೀರಾಮುಲು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಕಾರ್ಮಿಕರು, ವಿವಿಧ ಕಾರ್ಖಾನೆಗಳ ಕಾರ್ಮಿಕರೂ ಸೇರಿದಂತೆ ಸಹಸ್ರಾರು ಜನ ಕಾರ್ಮಿಕರು ದುಡಿಯುತ್ತಿದ್ದು, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸುವಂತೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರಿಗೆ ಕಳೆದ ಮೂರು ವರ್ಷಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಇದಕ್ಕೆ ಸ್ಪಂದಿಸಿರುವ ಸಚಿವರು ಬಳ್ಳಾರಿಯೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದಾರೆ. ಈ ಕುರಿತಂತೆ ಕೇಂದ್ರ ಕಾರ್ಮಿಕ ಇಲಾಖೆಯ ಜೊತೆ ತಾವು ಅನೇಕ ಬಾರಿ ಪತ್ರ ವ್ಯವಹಾರ ನಡೆಸಿದ್ದೇನೆ. ಇದಕ್ಕೆ ಪ್ರತಿಸ್ಪಂದಿಸಿ ಇಎಸ್ಐ ನ 100 ಬೆಡ್ ಹಾಸ್ಪಿಟಲ್ ಅನ್ನು ಬಳ್ಳಾರಿ ಜಿಲ್ಲೆಗೆ ಮಂಜೂರು ಮಾಡಿರುವುದರಿಂದ ಜಿಲ್ಲೆಯ ಕಾರ್ಮಿಕರು, ಸಾರ್ವಜನಿಕರ ಪರವಾಗಿ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಅಂತೆಯೇ ಬಳ್ಳಾರಿ ಜಿಲ್ಲೆಯ ನಾಗರೀಕರ ಬಹುದಿನಗಳ ಕನಸಾದ ‘ಪಾಸ್ ಪೋರ್ಟ್’ ಸೇವಾ ಕೇಂದ್ರವನ್ನು ಬಳ್ಳಾರಿಯಲ್ಲಿ ತೆರೆಯಲು ಅನುಮತಿ ನೀಡಿರುವ ಕೇಂದ್ರ ಸರ್ಕಾರದ ವಿದೇಶಾಂಗ ಖಾತೆಯ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೂ ಸಹ ಸಂಸದ ಶ್ರೀರಾಮುಲು, ಅನಂತ ಕೃತಜ್ಞತೆ ಸಲ್ಲಿಸಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತಾವು ಈ ಬಗ್ಗೆ ಪತ್ರಗಳನ್ನು ಬರೆದು ಮನವಿ ಮಾಡಿದ್ದುದಲ್ಲದೇ ವೈಯುಕ್ತಿಕವಾಗಿಯೂ ಕೂಡಾ ಕೋರಿಕೊಂಡಿದ್ದುದರ ಫಲವಾಗಿ ಬಳ್ಳಾರಿ ಜಿಲ್ಲೆಗೆ ಪಾಸ್ ಪೋರ್ಟ್ ಸೇವಾಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿರುವುದು ನಿಜಕ್ಕೂ ಸಂತಸಕರ, ಅಭಿನಂದನೀಯ ಎಂದು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸ್ಪಂದಿಸುತ್ತಿರುವ ವಿವಿಧ ಯೋಜನೆಗಳಿಗೆ ಮಂಜೂರಾತಿ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಸಚಿವರುಗಳಿಗೆ ಜಿಲ್ಲೆಯ ಜನತೆಯ ಜನರ ಪರವಾಗಿ ಕೃತಜ್ಞತಾ ವಂದನೆಗಳನ್ನು ತಿಳಿಸಿದ್ದಾರೆ.

Leave a Comment