ಇಎಂಐ ಮುಂದೂಡಿದ ಆರ್‌ಬಿಐ : ಬಡ್ಡಿದರ ಇಳಿಕೆ, ಸಾಲಗಾರರಿಗೆ ತಾತ್ಕಾಲಿಕ ನಿರಾಳ

ಮುಂಬೈ, ಮಾ. ೨೭- ಕೊರೊನಾ ಸೋಂಕಿಗೆ ಇಡೀ ದೇಶ ಸ್ತಬ್ಧಗೊಂಡಿದ್ದು, ಜನರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದ ನಡುವೆಯೇ ನೆರವಿಗೆ ಧಾವಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ವೈಯಕ್ತಿಕ, ಗೃಹ ಹಾಗೂ ವಾಹನ, ಚಿನ್ನಾಭರಣಗಳ ಸಾಲಗಳ ಮೇಲಿನ ಎಲ್ಲ ಬ್ಯಾಂಕ್‌ಗಳ ಇಎಂಐಗಳನ್ನು ಮೂರು ತಿಂಗಳ ಕಾಲ ಮುಂದೂಡಿದೆ.

  • ಕೊರೊನಾ ವೈರಾಣು ಸೋಂಕು ಹಿನ್ನೆಲೆ.
  • ಇಎಂಐಗಳನ್ನು ಮೂರು ತಿಂಗಳು ಮುಂದೂಡಿದ ಆರ್‌ಬಿಐ,
  • ವಾಹನ, ವೈಯಕ್ತಿಕ, ಚಿನ್ನಾಭರಣ, ಗೃಹ ಸಾಲದ ಇಎಂಐ ಜೂನ್‌ವರೆಗೂ ಮುಂದೂಡಿಕೆ.
  • ಎಲ್ಲ ಬ್ಯಾಂಕುಗಳಿಗೂ ಇದು ಅನ್ವಯ.
  • ಕಚ್ಛಾ ತೈಲದ ಬೆಲೆ ಇಳಿಕೆಯಿಂದ ತುಸು ಚೇತರಿಕೆ.
  • ಆರ್ಥಿಕ ಸಮತೋಲನಕ್ಕೆ ಅಗತ್ಯ ಕ್ರಮ.
  •  ರೆಪೋ ದರ 5.1 ರಿಂದ 4.4ಕ್ಕೆ ಇಳಿಕೆ.

ರಾಷ್ಟ್ರೀಕೃತ, ವಾಣಿಜ್ಯ, ಸಹಕಾರಿ ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ ವಿವಿಧ ಸಾಲ ಸೌಲಭ್ಯಗಳ ಪ್ರತೀ ತಿಂಗಳ ಕಂತು ಪಾವತಿಯನ್ನು ಜೂನ್‌ವರೆಗೂ ಮುಂದೂಡಿರುವುದಾಗಿ ಆರ್‌ಬಿಐನ ಗೌಱ್ನರ್ ಶಕ್ತಿಕಾಂತ್ ದಾಸ್ ಪ್ರಕಟಿಸಿದ್ದಾರೆ.

ಆರ್‌ಬಿಐನ ರೆಪೋ ದರವನ್ನು 5.1 ರಿಂದ 4.4ಕ್ಕೆ ಇಳಿಕೆ ಮಾಡಿರುವುದರಿಂದ ಸಾಲದ ಮೇಲಿನ ಬಡ್ಡಿ ದರವೂ ಇಳಿಕೆಯಾಗಲಿದೆ ಎಂದು ಹೇಳಿರುವ ಅವರು, ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಅನೇಕ ಕ್ಷೇತ್ರಗಳಿಗೆ ಲಾಭದಾಯಕವಾಗಲಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇ. 5.15ರಲ್ಲಿ ಮುಂದುವರೆಸಲಾಗಿತ್ತು. ಇದೀಗ ರಿಸರ್ವ್ ರೆಪೋ ದರವನ್ನು 90 ಅಂಶ ಕಡಿತಗೊಳಿಸಿ, ಶೇ. 4ರಷ್ಟಕ್ಕೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಣೆ ಮಾಡುವುದು ಅಗತ್ಯವಾಗಿದ್ದು, ಕೊರೊನಾದಿಂದ ಕಠಿಣ ಪರಿಸ್ಥಿತಿ ಎದುರಾಗಿದೆ. ಕಚ್ಛಾ ತೈಲದ ಬೆಲೆ ಇಳಿಕೆ ಸ್ವಲ್ಪ ಮಟ್ಟಿನ ರಿಲೀಫ್ ನೀಡಿದೆ. ಆರ್ಥಿಕ ಸಮತೋಲನಕ್ಕೆ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹಣದ ಹರಿವನ್ನು ಕಾಪಾಡುವುದು ಆರ್‌ಬಿಐನ ಅತಿ ದೊಡ್ಡ ಉದ್ದೇಶವಾಗಿದೆ. ಕಚ್ಛಾತೈಲ ಬೆಲೆ ಇಳಿಕೆಯಿಂದ ಹಣ ದುಬ್ಬರದ ಸಾಧ್ಯತೆಗಳಿಲ್ಲ, ಇಂತಹ ಪರಿಸ್ಥಿತಿಗಳಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರವಹಿಸಲಿವೆ ಎಂದು ಹೇಳಿದ ಅವರು, ಆರ್ಥಿಕ ಪರಿಸ್ಥಿತಿ ಕಠಿಣವಾಗಿರುವ ಸ್ಥಿತಿಯನ್ನು ನಾವೆಂದು ಕಂಡಿರಲಿಲ್ಲ ಎಂದು ಹೇಳಿದ್ದಾರೆ.

ನಗದು ಮೀಸಲು ಅನುಪಾತವನ್ನು ಆರ್‌‌ಬಿಐ 100 ಅಂಶ ಕಡಿತಗೊಳಿಸುವ ಮೂಲಕ ಶೇ. 3ರಷ್ಟು ನಿಗದಿ ಮಾಡಿದೆ. ಇದೇ 28 ರಿಂದ ಅನ್ವಯವಾಗುವಂತೆ ಮುಂದಿನ 1 ವರ್ಷಗಳವರೆಗೂ ಮುಂದುವರೆಯಲಿದ್ದು, ಇದರಿಂದ ಬ್ಯಾಂಕಿಂಗ್ ವಲಯದಲ್ಲಿ 1.37 ಲಕ್ಷ ಕೋಟಿ ಹಣದ ಹರಿವು ಇರಲಿದೆ ಎಂದು ತಿಳಿಸಿದ್ದಾರೆ.

150 ಮಂದಿ ಕ್ವಾರಂಟೈನ್

ಭಾರತೀಯ ರಿಸರ್ವ್ ಬ್ಯಾಂಕಿನ 150ಕ್ಕೂ ಅಧಿಕ ಮಂದಿ ನೌಕರರು ಕ್ವಾರಂಟೈನ್‌ನಲ್ಲಿದ್ದಾರೆ. ಇಂತಹ ಸ್ಥಿತಿ ಯಾವೊತ್ತು ಬಂದಿರಲಿಲ್ಲ ಎಂದು ಹೇಳಿದರು.

 

Leave a Comment