ಇಂದ್ರಜಾಲ ಜಲಚರದ ರೆಕ್ಕೆ ಮಾರಾಟ ಆರೋಪಿ ಸೆರೆ

ಬೆಂಗಳೂರು, ಆ. ೧೦- ನಿಷೇಧಿತ ಇಂದ್ರಜಾಲ ಜಲಚರದ ರೆಕ್ಕೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬಂಧಿಸಿ, 130 ಇಂದ್ರಜಾಲ ರೆಕ್ಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸಮುದ್ರದಲ್ಲಿ ದೊರೆಯುವ ವಿನಾಶದ ಅಂಚಿನಲ್ಲಿರುವ ಅಪರೂಪದ ಮೀನಿನ ಮಾದರಿಯ ಜಲಚರ ಇಂದ್ರಜಾಲವನ್ನು ಹಿಡಿಯುವುದು ಹಾಗೂ ಅದರ ರೆಕ್ಕೆಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ಅಕ್ರಮವಾಗಿ ಅವುಗಳನ್ನು ಹಿಡಿದು ರೆಕ್ಕೆಗಳನ್ನು ತಂದು ಮಾರಾಟ ಮಾಡುತ್ತಿದ್ದ ಬ್ಯಾಟರಾಯನಪುರದ ಮಧುಕುಮಾರ್‌(29)ನನ್ನು ಬಂಧಿಸಲಾಗಿದೆ.
ಆರೋಪಿಯು ಯಶವಂತಪುರದ ಹೂವಿನ ಮಾರುಕಟ್ಟೆಯ ಬಳಿ ಇಂದ್ರಜಾಲ ರೆಕ್ಕೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಬರುತ್ತದೆ ಎಂದು ನಂಬಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಇನ್ಸ್‌ಪೆಕ್ಟರ್ ಮೊಹಮದ್ ಮುಕಾರಾಮ್, ಮತ್ತವರ ಸಿಬ್ಬಂದಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯು ಉತ್ತರ ಪ್ರದೇಶದ ಮಥುರಾ ಮೂಲದ ಶರತ್ ಕುಮಾರ್ ಎಂಬಾತನಿಂದ ಇಂದ್ರಜಾಲ ರೆಕ್ಕೆಗಳನ್ನು ತಂದು ಮಾರಾಟ ಮಾಡುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಎರಡು ತಲೆ ಹಾವುಗಳಂತೆ ಇಂದ್ರಜಾಲ ಜಲಚರದ ರೆಕ್ಕೆಗಳನ್ನು ಅದೃಷ್ಟದ ನೆಪದಲ್ಲಿ ಮಾರಾಟ ಮಾಡುವ ಜಾಲವಿರುವುದು ಕಂಡುಬಂದಿದೆ. ಅದರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

Leave a Comment