ಇಂದು ಬೆಂಗಳೂರು ಕರಗ

ಬೆಂಗಳೂರು, ಏ.೧೯- ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಉತ್ಸವದ ಸಿದ್ಧತೆಗಳು ಆರಂಭಗೊಂಡಿವೆ.

ಕಳೆದ 9 ದಿನಗಳ ಹಿಂದೆಯೇ ಬೆಂಗಳೂರು ಕರಗಕ್ಕೆ ಚಾಲನೆ ದೊರೆತ್ತಿದ್ದು ಇಂದು ಮಧ್ಯರಾತ್ರಿಯಿಂದಲೇ ಧರ್ಮರಾಯಸ್ವಾಮಿ ದೇವಾಲಯದ ಆವರಣದಿಂದ ಉತ್ಸವದ ಮೆರವಣಿಗೆ ಆರಂಭವಾಗಲಿದೆ.

ಚೈತ್ರ ಪೌರ್ಣಮಿಯ ದಿನವಾದ ಇಂದು ನಡೆಯುವ ಉತ್ಸವದಲ್ಲಿ ಅರ್ಚಕ ಮನು ಅವರು ಕರಗವನ್ನು ಹೊರಲಿದ್ದಾರೆ. ಉತ್ಸವ ಮೂರ್ತಿಗಳಾದ ಅರ್ಜುನ ದೇವ ಮತ್ತು ದ್ರೌಪದಿ ದೇವಿ ಉತ್ಸವ ಮೂರ್ತಿಗಳನ್ನು ಮಹಾ ರಥದಲ್ಲಿಟ್ಟು ಚಾಲನೆ ನೀಡಲಾಗುವುದು. ಈ ವೇಳೆ ಮುತ್ಯಾಲ ದೇವಿಯ ರಥವು ಸಾಗಲಿದೆ. ನಗರದ ಧರ್ಮರಾಯಸ್ವಾಮಿ ದೇವಸ್ಥಾನದ ಮುಖ್ಯರಸ್ತೆಯಿಂದ ಹಾಗೂ ಶ್ರೀಕೃಷ್ಣ ದೇವಸ್ಥಾನ ನಗರ್ತಪೇಟೆ ವೇಣುಗೋಪಾಲ ಸ್ವಾಮಿ ದೇವಾಲಯ, ಸಿದ್ದಣ್ಣಗಲ್ಲಿ, ಶ್ರೀ ರಾಮ ಸೇವಾ ಮಂದಿರ, ಆಂಜನೇಯಸ್ವಾಮಿ ದೇವಾಲಯ, ಮಕ್ಕಳ ಬಸವಣ್ಣನ ಬಳಿ, ಗಾಣಿಗರಪೇಟೆ ಚನ್ನಬಸವಣ್ಣ ದೇವಾಲಯ, ಚಾಮುಂಡೇಶ್ವರಿ ದೇವಸ್ಥಾನ, ಈಶ್ವರ ದೇವಸ್ಥಾನ, ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ನಾಳೆ ಸೂರ್ಯೋದಯಕ್ಕೆ ಮುನ್ನ ಕರಗ ಉತ್ಸವ ಧರ್ಮರಾಯಸ್ವಾಮಿ ದೇವಸ್ಥಾನವನ್ನು ತಲುಪಲಿದೆ.

ಈ ಬಾರಿ ಕಾಟನ್ ಪೇಟೆಯ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗುವುದಿಲ್ಲ. ಅಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಅಕ್ಕಿಪೇಟೆ ಮಾರ್ಗವಾಗಿ ಸಂಚರಿಸಲಿದೆ ಎಂದು ದೇವಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.

ಉತ್ಸವದ ಉದ್ದಕ್ಕೂ ವೀರ ಕುಮಾರರು ವಿವಿಧ ಚಾಕರಿದಾರರ ಮನೆಗಳಿಗೆ ತೆರಳಿ ಪಾನಕ, ಫಲಹಾರಗಳನ್ನು ಸೇವಿಸಲಿದ್ದಾರೆ.

ಮಾರ್ಗ ಬದಲಾವಣೆ

ಇಂದು ರಾತ್ರಿ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ ನಡೆಯಲಿದ್ದು ಉತ್ಸವ ನಡೆಯುವ ಮಾರ್ಗಗಳಲ್ಲಿ ವಾಹನ ಸಂಚಾರಗಳನ್ನು ನಿಷೇಧಿಸಲಾಗಿದ್ದು, ಬದಲಿ ಮಾರ್ಗಗಳಲ್ಲಿ ವಾಹನ ಸವಾರರು ಸಾಗಬಹುದಾಗಿದೆ. ವಾಹನ ಚಾಲಕರು ಎಸ್.ಜೆ.ಪಿ. ರಸ್ತೆ ಮಾರ್ಗವಾಗಿ ಟೌನ್‌ಹಾಲ್ ತಲುಪಿ ಕೆಂಪೇಗೌಡ ರಸ್ತೆ ಮಾರ್ಗವಾಗಿ ಇತರೆಡೆ ತಲುಪಬಹುದು.

ಸಿಟಿ ಮಾರುಕಟ್ಟೆ ವೃತ್ತದ ಕಡೆಗೆ ಸಂಚರಿಸುವ ವಾಹನಗಳು ಮೈಸೂರು ರಸ್ತೆಯ ಎಎಸ್‌ಆರ್ ರಸ್ತೆಯಲ್ಲಿ ಬಲ ತಿರುವು ಪಡೆದು ಬ್ರಿಯಾಂಡ್ ವೃತ್ತದಲ್ಲಿ ಎಡ ತಿರುವು ಪಡೆದು ರಾಯನ್ ವೃತ್ತದ ಸಂಚರಿಸಬಹುದು. ಮೈಸೂರು ಕಡೆಯಿಂದ ಬರುವ ವಾಹನಗಳು ಬ್ರಿಯಾಂಡ್ ವೃತ್ತದಲ್ಲಿ ಬಲ ತಿರುವು ಪಡೆದು ಹಾದು ಮೆಡಿಕಲ್ ಕಾಲೇಜು ವೃತ್ತ ಜೆ.ಸಿ.ರಸ್ತೆ ಪ್ರವೇಶಿಸಿ ಮುಂದಕ್ಕೆ ಸಂಚರಿಸಬಹುದು.

ಕರಗವು ಸಿಟಿ ಮಾರುಕಟ್ಟೆ ವೃತ್ತದಿಂದ ಮುಂಭಾಗದ ಮೂಲಕ ಹಾದು ಪೊಲೀಸ್ ರಸ್ತೆ ಪ್ರವೇಶಿಸುವವರೆಗೂ ಬಿವಿಕೆ ಅಯ್ಯಂಗಾರ್ ಮೂಲಕ ಮೈಸೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳ ಮಾರ್ಗ ಬದಲಾಯಿಸಲಾಗಿದೆ.

ಚಿಕ್ಕ ಪೇಟೆ ವೃತ್ತದಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಿ ಪೊಲೀಸ್ ರಸ್ತೆಯಲ್ಲಿ ಮುಂದೆ ಸಾಗಿದ ನಂತರ ಎ.ಎಸ್.ಚಾರ್ ರಸ್ತೆಯಲ್ಲಿ ಬಲ ತಿರುವು ಪಡೆದು ಮುಂದಕ್ಕೆ ಸಾಗಬೇಕು.

Leave a Comment