ಇಂದು, ನಾಳೆ ಚಾಮುಂಡಿ, ನಂಜುಂಡನ ದರ್ಶನಕ್ಕೆ ನಿಷೇಧ

ಮೈಸೂರು, ಜೂ.13:- ಚಾಮುಂಡಿ ಬೆಟ್ಟ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಗಳಿಗೆ ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾ ದಿನಗಳಂದು ಸಾರ್ವಜನಿಕರಿಗೆ ದೇವರ ದರ್ಶನವನ್ನು ನಿಷೇಧಿಸಿ ಇಂದು ಮತ್ತು ನಾಳೆ ದೇವಾಲಯದ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದೆ.
ಶನಿವಾರ ಮತ್ತು ಭಾನುವಾರ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ರದ್ದು ಮಾಡಲಾಗಿದೆ. ಲಾಕ್‍ಡೌನ್ ಸಡಲಿಕೆ ಹಿನ್ನೆಲೆ ಮೈಸೂರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳನ್ನು ಷರತ್ತುಗಳ ಆಧಾರದ ಮೇಲೆ ಜೂನ್ 08 ರಿಂದ ತೆರೆಯಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಅನುಮತಿ ನೀಡಿದ್ದರು. ವಾರಾಂತ್ಯವಾದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಎರಡು ದಿನಗಳ ಕಾಲ ಭಕ್ತರ ಪ್ರವೇಶ ರದ್ದು ಮಾಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‌ ಆದೇಶ ಹೊರಡಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಗಳು ಕರ್ನಾಟಕ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯೂಲೇಷನ್-2020ರ ನಿಯಮ 12 ರಲ್ಲಿ ಹಾಗೂ disaster management act 2005 ಕಲಂ 30 (2) ಮತ್ತು 34 ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಕೋವಿಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈ ಆದೇಶ ಹೊರಡಿಸಿದ್ದು, ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಭಕ್ತರು ಬರುವ ಚಾಮುಂಡಿಬೆಟ್ಟಹಾಗೂ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಗಳಿಗೆ ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾ ದಿನಗಳಂದು ಸಾರ್ವಜನಿಕರಿಗೆ ದೇವರ ದರ್ಶನವನ್ನು ನಿಷೇಧಿಸಿದೆ. ಚಾಮುಂಡಿಬೆಟ್ಟಕ್ಕೆ ತಾವರೆಕಟ್ಟೆ ಕಡೆಯಿಂದ ಬೆಟ್ಟಕ್ಕೆ ಬರುವ ರಸ್ತೆಯಿಂದ ಮಾತ್ರ ಪ್ರವೇಶಾವಕಾಶ ಕಲ್ಪಿಸಿದ್ದು, ಉಳಿದ ರಸ್ತೆಗಳಿಂದ ಪ್ರವೇಶ ನಿಷೇಧಿಸಿದೆ.
ಮುಡಿಕಟ್ಟೆ ತಾತ್ಕಾಲಿಕ ಬಂದ್
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಮತ್ತು ಮಧ್ಯಾಹ್ನ 3-30 ರಿಂದ ಸಂಜೆ 5-30 ಘಂಟೆ ವರೆಗೆ ಮಾತ್ರ ಭಕ್ತರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.
ದಕ್ಷಿಣ ಜಾಶಿ ನಂಜನಗೂಡಿನ ಮುಡಿಕಟ್ಟೆಯ ಮೇಲೂ ಕೊರೋನಾ ಕರಿನೆರಳು ಬೀರಿದೆ. ಕೊರೊನಾ ವೈರಸ್ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಡಿಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಉಳಿದಂತೆ ನಂಜುಂಡನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ದೇವಾಲಯದಲ್ಲಿ ಪ್ರತಿನಿತ್ಯ ಜರಗುವ ಧಾರ್ಮಿಕ ಕಾರ್ಯಗಳನ್ನು ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a Comment