ಇಂದು ಕಡಬ ಬಂದ್  ಹಲ್ಲೆ ಖಂಡಿಸಿ ಹಿಂದೂ ಸಂಘಟನೆ ಕರೆ

ಪುತ್ತೂರು, ಜು.೧೭- ಗೋಸಾಗಾಟದ ಮಾಹಿತಿ ನೀಡಿದ್ದರೆಂಬ ಕಾರಣಕ್ಕೆ ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಮೇಶ್ ಭಟ್ ಕಲ್ಪುರೆ ಎಂಬವರ ಮೇಲೆ ತಂಡವೊಂದು ಕಬ್ಬಿಣದ ರಾಡ್‌ನಿಂದ ಗಂಭೀರ ಹಲ್ಲೆ ನಡೆಸಿದ ಘಟನೆ ನಿನ್ನೆ ಸಂಜೆ ಕಡಬ ಪೇಟೆಯಲ್ಲಿ ನಡೆದಿದ್ದು, ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಇಂದು ಕಡಬ ಬಂದ್‌ಗೆ ಕರೆ ನೀಡಿವೆ. ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಮೂಲತಃ ಕೃಷಿಕರಾಗಿದ್ದುಕೊಂಡು, ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಭಟ್ ಕಡಬದ ಸೂಪರ್ ಮಾರ್ಕೆಟ್ ಒಂದರಲ್ಲಿ ಸಾಮಾಗ್ರಿ ಖರೀದಿಸಿ ತನ್ನ ಜೀಪಿನ ಹತ್ತಿರ ಆಗಮಿಸುತ್ತಿದ್ದ ವೇಳೆ ಆಕ್ರಮಣಕಾರರು ಮುಗಿಬಿದ್ದು, ಯದ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಗಳನ್ನು ಕುಟ್ರುಪ್ಪಾಡಿ ಪರಿಸರದ ಪ್ರಕಾಶ, ಟಿನ್ಸನ್, ಸನೂಷ್, ಲಿಜೋ, ಸಂತೋಷ್ ಎಂದು ಗುರುತಿಸಲಾಗಿದೆ. ಗೋಸಾಗಾಟ ಪ್ರಶ್ನಿಸಿದ್ದಕ್ಕೆ  ಹಲ್ಲೆ ನಡೆದಿರಬಹುದು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಕಡಬ ಠಾಣೆಗೆ ಸಾರ್ವಜನಿಕರು ಜಮಾವಣೆಗೊಂಡಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಇಂದು ಕಡಬ ಬಂದ್‌ಗೆ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖರು ಕರೆ ನೀಡಿದ್ದಾರೆ. ಹಲ್ಲೆಗೊಳದವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನಲೆಯಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ಕಡಬಕ್ಕೆ ಧಾವಿಸಿದ್ದಾರೆ. ಪುತ್ತೂರು ತಾಲೂಕಿನಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುವಾಗ ಬಂದ್‌ಗೆ ಕರೆ ಕೊಟ್ಟಿರುವುದು, ಜಿಲ್ಲಾಡಳಿತ ತಲೆನೋವು ತಂದಿದೆ. ಘಟನೆ ತಿಳಿಯುತ್ತಿದ್ದಂತೆ ಆಗಮಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಸಾರ್ವಜನಿಕರು ಕಡಬ ಠಾಣೆಯಲ್ಲಿ ಸೇರಿದ್ದು ತುಸು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು, ಬಳಿಕ ಆಗಮಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಕುಲಕರ್ಣಿ ಸಂಘಟನೆಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಾರ್ವಜನಿಕರನ್ನು ಠಾಣೆಯಿಂದ ಹೋಗುವಂತೆ ವಿನಂತಿಸಿದರು. ಬಳಿಕ ಠಾಣೆಯಿಂದ ಸಾರ್ವಜನಿಕರು ತೆರಳಿದರು. ಇದೇ ಸಂದರ್ಭದಲ್ಲಿ ಠಾಣೆಗೆ ಆಗಮಿಸಿದ ಉದ್ಯಮಿಗಳಾದ ಬಿಜೂ ಹಾಗೂ ಬಿನೋಯ್ ಅವರನ್ನು ಸಾರ್ವಜನಿಕರು ಘೆರಾವ್ ಮಾಡಿದರು. ಮಾತಿನ ಚಕಮಕಿ ಕೂಡ ನಡೆಯಿತು. ಘಟನೆಯ ನಿಯಂತ್ರಣಕ್ಕಾಗಿ ಪೋಲಿಸರು ಎಲ್ಲರನ್ನು ಚದುರಿಸಿದರು.

Leave a Comment