ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸದಂತೆ ಒತ್ತಾಯ

ಬೆಂಗಳೂರು, ನ. ೧೭- ನಗರದ ಬಡ ಜನತೆಯ ಹಸಿವು ನೀಗಿಸುತ್ತಿರುವ, ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸದಂತೆ ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸಬೇಕೆಂಬ ಹೇಳಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮೇಯರ್ ಗೌತಮ್ ಕುಮಾರ್ ಅವರನ್ನು ಭೇಟಿ ಮಾಡಿ ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಾಯಿಸದಂತೆ ಮನವಿ ಪತ್ರ ಸಲ್ಲಿಸಿದರು.
ದೇಶಕ್ಕಾಗಿ ಬಲಿದಾನವಾದ ವ್ಯಕ್ತಿಗಳ ಹೆಸರನ್ನು ನಾಮಕರಣ ಮಾಡಿ, ಮತ್ತೇ ಅವರ ಹೆಸರನ್ನು ತೆಗೆಯುವ ನಿರ್ಧಾರ ದೇಶ ದ್ರೋಹಕ್ಕಿಂತ ಕಠಿಣ ನಿರ್ಧಾರವಾಗಿರುತ್ತದೆ ಎಂದು ಹೇಳಿಕೆ ನೀಡಿರುವ ಅವರು, ರಾಜಕೀಯಕ್ಕಾಗಿ ಹೆಸರು ಬದಲಿಸುವ ಹೇಳಿಕೆ ನೀಡುವುದು ಸರಿಯಲ್ಲ. ಆದ್ದರಿಂದ ಇಂತಹ ಹೇಳಿಕೆಗಳಿಗೆ ಆಸ್ಪದ ನೀಡದೆ ಇಂದಿರಾ ಕ್ಯಾಂಟಿನ್ ಹೆಸರನ್ನು ಬದಲಿಸದೆ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಅವರ ಹೆಸರನ್ನು ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಕೆಂಪೇಗೌಡ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರನ್ನು ನಾಮಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಅವರು ತಿಳಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರ ಕನಸಿನ ಬೆಂಗಳೂರನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸಕ್ಕೆ ಬಿಬಿಎಂಪಿ ಗಮನ ಹರಿಸಬೇಕೆಂದು ಆಗ್ರಹಪಡಿಸಿದ್ದಾರೆ.
ಈ ವೇಳೆ ಬೆಂ.ನಗರ ಪ್ರಚಾರ ಸಮಿತಿಯ ಅಧ್ಯಕ್ಷರುಗಳಾದ ಜಿ.ಜನಾರ್ಧನ್, ಎ.ಆನಂದ್, ಜಯಸಿಂಹ, ಮುಖಂಡರಾದ ಎಂ.ಎ.ಸಲೀಂ, ಶೇಖರ್, ಚಿಕ್ಕಣ್ಣ, ಪುಟ್ಟರಾಜು, ಮತ್ತಿತರರು ಇದ್ದರು.

Leave a Comment