ಇಂದಿರಾ ಕ್ಯಾಂಟಿನ್ – ವಾಗ್ವಾದ

ರಾಯಚೂರು.ಜ.12- ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ನಗರಸಭೆಯಿಂದ ಸರ್ಕಾರಕ್ಕೆ ಹಣ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಆಡಳಿತರೂಢ ಕಾಂಗ್ರೆಸ್, ಬಿಜೆಪಿ ಹಾಗೂ ಜಾದಳ ಸದಸ್ಯರ ಮಧ್ಯೆ ಪರಸ್ಪರ ವಾಗ್ವಾದ ನಡೆದ ಪ್ರಸಂಗ ನಡೆಯಿತು.
ಪ್ರಭಾರಿ ಅಧ್ಯಕ್ಷ ಜಯಣ್ಣ ರವರ ಅಧ್ಯಕ್ಷತೆಯಲ್ಲಿ ನಗರಸಭೆ ನೂತನ ಸಭಾಂಗಣದಲ್ಲಿ ಕರೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಅನುದಾನದಡಿ ನಗರದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಸಿಎಂಸಿಯಿಂದ ಸರ್ಕಾರಕ್ಕೆ ಅನುದಾನ ಬಿಡುಗಡೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರಾದ ಬಿ.ಗೋವಿಂದ, ಮಹಾಲಿಂಗ ಹಾಗೂ ಜಾದಳ ಸದಸ್ಯ ಹರೀಶ ನಾಡಗೌಡ, ಸದಸ್ಯರ ಗಮನಕ್ಕಿಲ್ಲದೇ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಶೋಭೆಯಲ್ಲ.
ಸದಸ್ಯರ ಆಕ್ಷೇಪಕ್ಕೂ ಮನ್ನಣೆ ನೀಡದಿದ್ದರೇ, ನಗರ ಪ್ರದೇಶದಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ಸಮಾನಾಂತರವಾಗಿ ಅಟಲ್ ಜೀ ಹಾಗೂ ಅಪ್ಪಾಜಿ ಕ್ಯಾಂಟಿನ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಸಭೆಯ ನಿರ್ಣಯ ಕೈಗೊಳ್ಳುವಂತೆ ಪಟ್ಟು ಹಿಡಿದಿರುವುದು ಮೂರು ಪಕ್ಷದ ಸದಸ್ಯರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿ ಉದ್ದೇಶಿತ ಸಭೆ ಕೆಲಕಾಲ ಗೊಂದಲದ ಗೂಡಾಗುವಂತಾಯಿತು.
ಇಂದಿರಾ ಕ್ಯಾಂಟಿನ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸಮರ್ಥನೆ ನೀಡಿದ ಜಯಣ್ಣ ರವರು ಸರ್ಕಾರದ ಆದೇಶದ ಮೇರೆಗೆ ಅನುದಾನ ಬಿಡುಗಡೆಯೊಂದಿಗೆ ನಗರದಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡಲಾಗುವುದು. ಈ ವಿಷಯವನ್ನು ಅನ್ಯತಾ ಭಾವನೆಯೊಂದಿಗೆ ಅರ್ಥೈಯಿಸುವುದು ಸೂಕ್ತವಲ್ಲವೆಂದರು. ಬಹು ನಿರೀಕ್ಷಿತ 24×7 ಶುದ್ಧ ಕುಡಿವ ನೀರಿನ ಯೋಜನೆ ಪೈಪ್ ಲೈನ್ ಸೋರಿಕೆ, ಯುಜಿಡಿ ಕಾಮಗಾರಿ ತೀರಾ ಮಂದ ಕಾಯ್ದುಕೊಳ್ಳಲಾಗುತ್ತಿರುವ ಗುತ್ತೇದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಗರಸಭೆ ಸದಸ್ಯ ಈ.ವಿನಯಕುಮಾರ, ಕಿರಿಯ ಅಭಿಯಂತರ ಅಶೋಕ ರವರನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಗರಾದ್ಯಂತ 35 ವಾರ್ಡ್ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುತ್ತಿರುವ 24×7 ಶುದ್ಧ ಕುಡಿವ ನೀರಿನ ಯೋಜನೆ ಆರಂಭದಲ್ಲಿಯೇ ಹಳ್ಳಿ ಹಿಡಿಯುವಂತಾಗಿದೆಂದು ತೀವ್ರ ಕೆಂಡಾಮಂಡಲರಾದರು. ವಾರ್ಡ್ 10 ರ ಬಡಾವಣೆ ವ್ಯಾಪ್ತಿ ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಒಳ ಚರಂಡಿ ಕಾಮಗಾರಿ ನೆಪದಡಿ ರಸ್ತೆಯನ್ನು ಮನಬಂದಂತೆ ಅಗೆದು ಗುಂಡಿ ಸಮತಟ್ಟು ಮಾಡದೇ ಅಪೂರ್ಣಕ್ಕೆ ಸಂಬಂಧಪಟ್ಟ ಗುತ್ತೇದಾರರು ಕಾರಣರಾಗಿದ್ದಾರೆ.
ನಗರಸಭೆ ಅಧಿಕಾರಿಗಳು ಹಾಗೂ ಅಭಿಯಂತರರ ಚೆಲ್ಲಾಟದಿಂದಾಗಿ ಬಹಿರ್ದೆಸೆಗೆ ತೆರಳುವ ಬಡಾವಣೆ ವಾಸಿಗಳು ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರುವ ದಯಾನೀಯ ಸ್ಥಿತಿಯಿದೆ. ಉದ್ದೇಶಿತ ಕಾಮಗಾರಿ ಸಕಾಲದಡಿ ಪೂರ್ಣಗೊಳಿಸುವಂತೆ ಹಲವು ಬಾರೀ ಸ್ಪಷ್ಟ ಸೂಚನೆ ನೀಡಿದರೂ ಸದಸ್ಯರ ಮಾತಿಗೆ ಕನಿಷ್ಟ ಬೆಲೆಯಿಲ್ಲದಂತೆ ನಡೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯೆ ಧೋರಣೆಯಿಂದಾಗಿ ವಾರ್ಡ್ ಸದಸ್ಯರಿಗೆ ನಿವಾಸಿಗಳು ಹಿಡಿಶಾಪ ಹಾಕುವಂತಾಗಿದೆ.
24×7 ಶುದ್ಧ ಕುಡಿವ ನೀರಿನ ಯೋಜನೆ ಕಾಮಗಾರಿ ನಿರ್ವಹಣೆಯಲ್ಲಿಯೂ ತೀರಾ ಮಂದ ಕಾಯ್ದುಕೊಳ್ಳಲಾಗುತ್ತಿದೆಂದು ಅಸಮಾಧಾನ ವ್ಯಕ್ತಪಡಿಸಿದರು. ವಿನಯ ರವರ ಮಾತಿಗೆ ಧ್ವನಿಗೂಡಿಸಿದ ಸದಸ್ಯರಾದ ಬಿ.ಗೋವಿಂದ, ಮಹಾಲಿಂಗ ಹಾಗೂ ಎನ್.ಶ್ರೀನಿವಾಸ ರೆಡ್ಡಿ, ಈಶಪ್ಪ, ಸೈಯದ್ ಶಾಲಂ ರವರು 35 ವಾರ್ಡ್‌ಗಳಲ್ಲಿ ನಿರ್ವಹಿಸಲಾಗುತ್ತಿರುವ ಶುದ್ಧ ಕುಡಿವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿ ಆರಂಭದಲ್ಲಿಯೇ ಸೋರಿಕೆ ಕಂಡಿದೆ.
ಕೆಲ ಬಡಾವಣೆಗಳಲ್ಲಿ ನಿವಾಸಿಗಳ ಮನೆಗಳಿಗೆ ನಳ ಸಂಪರ್ಕವೇ ಕಲ್ಪಿಸಿಲ್ಲ. ಕೋಟ್ಯಾಂತರ ವೆಚ್ಚದಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿ ಆರಂಭದಲ್ಲಿಯೇ ಸೋರಿಕೆಗೆ ಕಾರಣರಾದ ಗುತ್ತೇದಾರರನ್ನು ಕರೆಯಿಸುವವರೆಗೂ ಸಭೆ ಮುಂದುವರೆಸದಂತೆ ಪಟ್ಟುಹಿಡಿದರು. ಜಯಣ್ಣ ರವರು ಮಾತನಾಡಿ, ಶುದ್ಧ ಕುಡಿವ ನೀರು, ಒಳ ಚರಂಡಿ ಕಾಮಗಾರಿ ಅಪೂರ್ಣ ಕುರಿತು ನಿವಾಸಿಗಳಿಂದ ದೂರುಗಳು ತೀವ್ರಗೊಂಡಿದ್ದು ಮುಂದಿನ ವಾರ ಗುತ್ತೇದಾರರು-ಅಧಿಕಾರಿಗಳ ಪ್ರತ್ಯೇಕ ಸಭೆ ಕರೆಯುವ ಭರವಸೆ ಮೇರೆಗೆ ಪಟ್ಟು ಸಡಿಲಿಸಲಾಯಿತು.
ಸದಸ್ಯ ಹರೀಶ ನಾಡಗೌಡ ಮಾತನಾಡಿ, ಪ್ರಮುಖ ಬಡಾವಣೆ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀರಿನಂತೆ ವ್ಯಯಿಸಿದರೂ, ಜೆಸ್ಕಾಂ ಅಧಿಕಾರಿಗಳು ಮಾತ್ರ ರಸ್ತೆ ಮಧ್ಯೆ ಅಳವಡಿಕೆ ಮಾಡಿರುವ ವಿದ್ಯುತ್ ಕಂಬ ತೆರವುಗೊಳಿಸದೇ ನಿರ್ಲಕ್ಷ್ಯೆ ಧೋರಣೆ ಮುಂದುವರೆಸಿದ್ದಾರೆ. ರಸ್ತೆ ಕಾಮಗಾರಿ ನಿರ್ವಹಣೆಗೆ ಅಡ್ಡಿಯಾಗಿರುವ ವಿದ್ಯುತ್ ಕಂಬ ಶೀಘ್ರ ವಿಲೇವಾರಿ ಮಾಡಲು ಜೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದರು.
ಪ್ರಮುಖ ವೃತ್ತಗಳಲ್ಲಿ ಸಂಗ್ರಹಿಸಲಾಗುವ ಘನತ್ಯಾಜ್ಯ ಸಕಾಲಕ್ಕೆ ವಿಲೇವಾರಿಯೊಂದಿಗೆ ನೈರ್ಮಲ್ಯೀಕರಣ ಕುರಿತು ಕಾಲಕಾಲಕ್ಕೆ ಸಂಕ್ಷಿಪ್ತ ವರದಿ ನೀಡದಿದ್ದಲ್ಲಿ ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಜಯಣ್ಣ ರವರು ಪ್ರಭಾರಿ ಪರಿಸರ ಅಭಿಯಂತರ ಅಮರೇಶ ಅವರಿಗೆ ಅಂತಿಮ ಸೂಚನೆ ನೀಡಿದರು. ಇನ್ನುಳಿದಂತೆ ಪ್ರಮುಖ 29 ಅಜೆಂಡ ಚರ್ಚೆಗೆ ಬಾರದೇ ಎಲ್ಲದಕ್ಕೂ ಪಾಸ್… ಪಾಸ್… ಎಂದು ಸಮ್ಮತಿ ಸೂಚಿಸಿರುವುದು ಗಮನಾರ್ಹವಾಗಿತ್ತು.
@12bc = ಗುತ್ತಿಗೆ ಪದ್ಧತಿ ರದ್ದಿಗೆ ನಿರ್ಣಯ
ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಮಾಡಲು ನಗರಸಭೆಯಲ್ಲಿಂದು ಕರೆದ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ರಾಯಚೂರನ್ನು ಧೂಳು ಮುಕ್ತ ನಗರವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಟ ವೇತನ ನೀಡಲು ಕೇಂದ್ರ ಸರ್ಕಾರ ಆದೇಶವಿದ್ದರೂ, ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದು ಮಾಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಪ್ರಭಾರಿ ಅಧ್ಯಕ್ಷ ಜಯಣ್ಣ ರವರು 11 ಜನ ಕಾರ್ಮಿಕರನ್ನು ಪುನಃ ಕಾರ್ಯಕ್ಕೆ ನಿಯುಕ್ತಿ ಮಾಡುವಂತೆ ಸಫಾಯಿ ಕರ್ಮಚಾರಿ ಆಯೋಗ ನಿರ್ದೇಶನ ನೀಡಿದೆ. ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ 29 ಕಾರ್ಮಿಕರಿಗೆ ಕನಿಷ್ಟ ವೇತನ ವಿತರಣೆಯೊಂದಿಗೆ ಪ್ಯಾಕೇಜ್ ನಂ.2, 7 ರಲ್ಲಿರುವ ಕಾರ್ಮಿಕರಿಗೆ ಪಿಎಫ್ ಪಾವತಿಯಾಗದ ಕುರಿತು ಪರಿಶೀಲನೆ ಮಾ‌ಡುವಂತೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ ಅವರು, ಎರಡು ತಿಂಗಳ ಕಾಲಾವಧಿಯಲ್ಲಿ ಶಾಶ್ವತ ಫೈನಾಂಷೀಯಲ್ ಕೌನ್ಸಿಲ್ ಮಾಡಿರುವ ತೃಪ್ತಿಯಿದೆಂದರು.
ಪೌರಾಯುಕ್ತ ಎಸ್.ರಮೇಶ ನಾಯಕ ಸೇರಿದಂತೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Comment