ಇಂದಿರಾ ಕ್ಯಾಂಟಿನ್ ಉಚಿತ ತಿಂಡಿ, ಊಟ ನೀಡಿ: ಸಿಎಂಗೆ ಸಿದ್ದು ಆಗ್ರಹ

ಬೆಂಗಳೂರು, ಏ. ೬- ನಿರ್ಗತಿಕರು ಹಾಗೂ ಬಡವರು, ಕೂಲಿಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ತಿಂಡಿ ಮತ್ತು ಊಟವನ್ನು ಮುಂದುವರಿಸಬೇಕು. ಒಂದು ವೇಳೆ ಇದನ್ನು ದುರುಪಯೋಗ ಪಡಿಸಿಕೊಂಡ ಬಿಬಿಎಂಪಿ ಅಧಿಕಾರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ತಿಂಡಿ ಮತ್ತು ಊಟವನ್ನು ನಿಲ್ಲಿಸಿರುವ ಸರ್ಕಾರದ ಕ್ರಮದ ಬಗ್ಗೆ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಅವರು ಇಂದಿರಾ ಕ್ಯಾಂಟೀನ್‌ನ ತಿಂಡಿ ಮತ್ತು ಊಟ ದುರುಪಯೋಗವಾಗದಂತೆ ನಿಗಾವಹಿಸಿ ಬಡವರಿಗೆ ವಿತರಿಸಬೇಕು ಎಂದು ಅವರು ಮನವಿ ಮಾಡಿದರು.

ಇಂದಿರಾ ಕ್ಯಾಂಟೀನ್ ಊಟ, ತಿಂಡಿ ನಿಲ್ಲಿಸಿರುವ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಸಿದ್ದು ಅವರಿಗೆ ದೂರವಾಣಿ ಕರೆ ಮಾಡಿ, ಊಟ, ತಿಂಡಿ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ದುರುಪಯೋಗವಾದ ಕಾರಣ ದರವನ್ನು ನಿಗದಿಪಡಿಸಬೇಕಾಯಿತು ಎಂದು ಸ್ಪಷ್ಟನೆ ನೀಡಿದರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ತಮಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಲಾಕ್‌ಡೌನ್‌ನಿಂದ ರೈತರು ಕೃಷಿ ಕೂಲಿಕಾರ್ಮಿಕರು ಹಾಗೂ ಹಲವು ಕ್ಷೇತ್ರಗಳ ದುಡಿಯುವ ವರ್ಗಗಳಿಗೆ ತೊಂದರೆಯಾಗಿದ್ದು, ಅವರ ನೆರವಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿದರು.

Leave a Comment