ಇಂದಿನಿಂದ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ಆರಂಭ

ಮೈಸೂರು, ಮೇ.25:- ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿತ್ತು. ಲಾಕ್ ಡೌನ್ ಇದ್ದ ಕಾರಣ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಮತ್ತೆ ಇಂದಿನಿಂದ ಆರಂಭವಾಗಲಿದೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರು ಹಾಗೂ ಬೆಳಗಾವಿಗೆ ಸಂಪರ್ಕ ಇರಲಿದೆ. ಏರ್ ಇಂಡಿಯಾ ಅಲಯನ್ಸ್ ಸಂಸ್ಥೆ ಹಾಗೂ ಟ್ರುಜೆಟ್ ಏರ್ ಲೈನ್ಸ್ ಸೇವೆ ಒದಗಿಸಲಿದೆ. ಎಟಿಆರ್ 72 ಆಸನಗಳ ಎರಡು ವಿಮಾನಗಳು ಸೇವೆ ಆರಂಭಿಸಲಿವೆ. ಅಲಯನ್ಸ್ ಏರ್ ಸಂಸ್ಥೆಯ ವಿಮಾನವು ಮೈಸೂರಿನಿಂದ ಸಂಜೆ 6.15ಕ್ಕೆ ಹೊರಟು 7.15ಕ್ಕೆ ಬೆಂಗಳೂರು ತಲುಪಲಿದೆ. ಇದಕ್ಕೂ ಮೊದಲು ಈ ವಿಮಾನವು ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು 5.30 ಕ್ಕೆ ಮೈಸೂರಿಗೆ ಬರಲಿದೆ. ಮಂಗಳವಾರ ಮಧ್ಯಾಹ್ನ 3.30ಕ್ಕೆ ಬೆಂಗಳೂರಿನಿಂದ ಹೊರಟು 4.30ಕ್ಕೆ ಮೈಸೂರು ತಲುಪಲಿದೆ. ಅಂದು ರಾತ್ರಿ 9.45ಕ್ಕೆ ಮೈಸೂರಿನಿಂದ ಹೊರಟು 10.45ಕ್ಕೆ ಬೆಂಗಳೂರು ತಲುಪಲಿದೆ.
ಏರ್ ಇಂಡಿಯಾ ವೆಬ್ ಸೈಟ್ ಪ್ರಕಾರ ಮೈಸೂರಿನಿಂದ ಬೆಂಗಳೂರಿಗೆ 1,730ರೂ.ದರವಿದೆ. ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸಿದ್ಧತೆ ಮಾಡಿಕೊಂಡಿದ್ದೇವೆ. ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದ್ದೇವೆ. ಪ್ರವಾಸಿಗರ ತಪಾಸಣೆಗೆ ಮೊದಲ ಆದ್ಯತೆ ನೀಡಿದ್ದೇವೆ. ಬರುವ ಪ್ರವಾಸಿಗರಿಗೆ ಸ್ಯಾನಿಟೈಸರ್ ಹಾಕಲಾಗುವುದು ಬೇರೆ ಕಡೆಯಿಂದ ಬರುವವರು ಆರೋಗ್ಯ ಕ್ಷಮತೆ ಕುರಿತು ಸ್ವಯಂ ದೃಢೀಕರಣ ಪತ್ರ ನೀಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯ ಎಂದಿದ್ದಾರೆ.
ಟ್ರುಜೆಟ್ ಏಲ್ ಲೈನ್ಸ್ ವಿಮಾನವು ಮೈಸೂರಿನಿಂದ ಸೋಮವಾರ ಸಂಜೆ 4.55ಕ್ಕೆ ಹೊರಟು 6.15ಕ್ಕೆ ಬೆಳಗಾವಿ ತಲುಪಲಿದೆ. ಇದಕ್ಕೂ ಮೊದಲು ಬೆಳಗಾವಿಯಿಂದ ಮಧ್ಯಾಹ್ನ 3ಕ್ಕೆ ಹೊರಟು ಸಂಜೆ 4.20ಕ್ಕೆ ಮೈಸೂರು ತಲುಪಲಿದೆ. ಈ ವಿಮಾನ ಸೇವೆ ನಿತ್ಯವೂ ಇರಲಿದೆ. ಟ್ರುಜೆಟ್ ವೆಬ್ ಸೈಟ್ ಪ್ರಕಾರ ಮೈಸೂರಿನಿಂದ ಬೆಳಗಾವಿಗೆ 2,809 ರೂ.ದರವಿದೆ.

Share

Leave a Comment