ಇಂದಿನಿಂದ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ

ಅರಸೀಕೆರೆ, ನ. ೯-  ನಗರದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಕಳೆದ 60 ದಿನಗಳಿಂದ ಪಟ್ಟಣದ ಜನರಿಗೆ ಶ್ರದ್ಧಾ-ಭಕ್ತಿಯ ಕೇಂದ್ರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಿದ್ದ 77ನೇ ವರ್ಷದ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವವನ್ನು ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿದೆ.

ನ. 9 ರಂದು ಸಂಜೆ 6 ಗಂಟೆಯಿಂದ ಶನಿವಾರ ರಾತ್ರಿವರೆಗೂ ಪುಷ್ಪಾಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಲಾಗುವುದು.

ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ಗೌಡ, ಜಿಲ್ಲಾಧಿಕಾರಿ, ರೋಹಿಣಿ ಸಿಂಧೂರಿ, ಶಾಸಕ ಕೆ.ಎನ್. ಶಿವಲಿಂಗೇಗೌಡ ಚಾಲನೆ ನೀಡುವರು. ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು.

ಮೆರವಣಿಗೆಯಲ್ಲಿ ಡೆಂಕಣಿಕೋಟೆ ಶಿವಶಕ್ತಿ ಕೀಲು ಕುದುರೆ ಸಂಘದಿಂದ ಕೀಲುಕುದುರೆ ಮಡಿಕೇರಿ ಅವರಿಂದ ಪರಶುರಾಮ ಕಾಳಗ ಪ್ರದರ್ಶನ ಹಾಗೂ ಡೊಳ್ಳು ಕುಣಿತ, ಆರ್ಕೆಸ್ಟ್ರಾ, ವೀರಭದ್ರ ಕುಣಿತ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಟಿ.ಎಸ್. ರವಿಕುಮಾರ್ ತಂಡದಿಂದ ತಮಟೆ ಚಮತ್ಕಾರ ಚಂಡೆವಾದ್ಯ, ಗೊಂಬೆ ಪ್ರದರ್ಶನ, ಕರಡೆ ವಾದ್ಯ ಮಂಗಳೂರಿನ ಚಿಲಿಪಿಲಿ ವೀರಗಾಸೆ ಸೇರಿದಂತೆ ಇನ್ನಿತರ ಜಾನಪದ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಮೆರವಣಿಗೆಯು ಗಣಪತಿ ಪೆಂಡಾಲ್‌ನಿಂದ ವೆಂಕಟೇಶ್ವರ ಕಲಾಭವನದ ಮುಂಭಾಗ ಸಂತೆಪೇಟೆ ಶಿವಾಲಯ ಪೇಟೆ ಬೀದಿ ಮಾರ್ಕೆಟ್ ಚೌಕ, ಪಾತ್ರೆ ಪುಟ್ಟಯ್ಯ ಶೆಟ್ಟಿ ಸರ್ಕಲ್ ಸ್ಟೇಷನ್ ರೋಡ್, ಹಳೆ ಆರ್ಎಂಎಸ್ ಬೀದಿ, ಬಿ.ಹೆಚ್. ರಸ್ತೆ, ಯಜಮಾನ ರಂಗೇಗೌಡರ ಬೀದಿ, ಕರಿಯಮ್ಮನ ಗುಡಿ ಬೀದಿ, ಕುವೆಂಪು ವೃತ್ತ ಸಾಯಿನಾಥ ರಸ್ತೆ ಲಕ್ಷ್ಮಿಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಶನಿವಾರ ರಾತ್ರಿ ಕಂತೇನಹಳ್ಳಿ ಪ್ರವೇಶಿಸಲಿದೆ. ಶನಿವಾರ ಸಂಜೆ ರಾಷ್ಟ್ರ ಪ್ರಶಸ್ತಿ ವಿಜೇತ ರಾಜ್‌ಕಮಲ್ ಫೈಯರ್ ವರ್ಕ್ಸ್ ಶಂಕರಾಚಾರ್ಯ ರವರಿಂದ ಮದ್ದುಗುಂಡುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು,. ನಂತರ ಗಣೇಶಮೂರ್ತಿಯನ್ನು ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಗುವುದು.

ನಗರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣ ಮಾತನಾಡಿ, ಎಲ್ಲಾ ಧರ್ಮಗಳ ಆಚರಣೆಯನ್ನು ನಾವುಗಳು ಗೌರವಿಸುವ ಸದ್ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಯಾವುದೇ ರೀತಿಯ ಗಲಭೆಗಳು ನಡೆಯಲು ಸಾಧ್ಯವಿಲ್ಲ. ಎಲ್ಲಾ ಧರ್ಮದ ಜನರು ವಿಶಾಲ ಹೃದಯಿಗಳಾಗಿ ಗಣಪತಿ ವಿಸರ್ಜನಾ ಮಹೋತ್ಸವ ನಡೆಸಬೇಕು ಎಂದು ಹೇಳಿದರು.

ಪ್ರಸನ್ನ ಗಣಪತಿ ವಿಸರ್ಜನೆ ಮಹೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯದಲ್ಲೇ ಮನೆ ಮಾತಾಗಿದ್ದು, ಉತ್ಸವ ನಡೆಸಲು ಪೊಲೀಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಗಣಪತಿ ವಿಸರ್ಜನ ಮಹೋತ್ಸವದ ವೇಳೆ ಯಾರಾದರೂ ಅನುಚಿತವಾಗಿ ನಡೆದುಕೊಂಡರೆ ವಿನಾ ಕಾರಣ ಗಲಾಟೆ ಗದ್ದಲಕ್ಕೆ ಮುಂದಾದರೆ ಪಾನಮತ್ತರಾಗಿ ಉತ್ಸವದಲ್ಲಿ ಪಾಲ್ಗೊಂಡರೆ ಅಂಥವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ಜಮೀಲ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಮುಸ್ಲಿಂ ಸಮಾಜದ ವತಿಯಿಂದ ಸಂಪೂರ್ಣ ಸಹಕಾರ ನೀಡಲಿದೆ. ಪ್ರಸನ್ನ ಗಣಪತಿಯ ತಾಲ್ಲೂಕಿನ ಜನತೆಗೆ ಸಕಲ ಸನ್ಮಂಗಳವನ್ನು ಕರುಣಿಸಲಿ ಎಂದು ಹೇಳಿದರು.

ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಂಗಸ್ವಾಮಿ, ನಗರಸಭೆ ಪೌರಾಯುಕ್ತ ಸಿ.ಆರ್. ಪರಮೇಶ್ವರಪ್ಪ, ಅಗ್ನಿಶಾಮಕ ಠಾಣೆಯ ರೇವಣ್ಣಗೌಡ ಸೇರಿದಂತೆ ಹಿಂದೂ, ಮುಸ್ಲಿಂ ಸಮಾಜದ ಮುಖಂಡರು ಚುನಾಯಿತ ಜನಪ್ರತಿನಿಧಿಗಳು ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Leave a Comment