ಇಂದಿಗೂ ಮನು ನಮ್ಮಲ್ಲಿ ಜೀವಂತ: ಸತ್ಯಂಪೇಟೆ ವಿಷಾಧ

ಕಲಬುರಗಿ, ಏ. 22: ನಮಗೆ ಅರಿವಿಲ್ಲದೆಯೇ ನಮ್ಮಲ್ಲಿ ಇನ್ನೂ ಮನು ಜೀವಂತವಾಗಿದ್ದಾನೆ. ಮನುವಾದಿ ವಿಚಾರ ಧಾರೆಯ ವಿರುದ್ಧ ಹೋರಾಡಿದ ಬಸವಣ್ಣ, ಡಾ.ಅಂಬೇಡ್ಕರರನ್ನು ಸ್ವೀಕರಿಸುವ ಮನಸ್ಸು ನಮ್ಮಲ್ಲಿ ಇಲ್ಲ ಎಂದು ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ವಿಷಾಧಿಸಿದರು.
ನಗರದ ಪಿಲ್ಲೂ ಹೋಮಿ ಇರಾನಿ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯಿಂದ ಒಂದು ತಿಂಗಳ ಕಾಲ ವಿವಿಧ ಕಾಲೇಜುಗಳಲ್ಲಿ ಹಮ್ಮಿಕೊಂಡಿರುವ ಕಾಯಕ ತತ್ವ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಬಾಬಾಸಾಹೇಬರ ಜಯಂತಿ ನಿಮಿತ್ಯ ವಿಚಾರಕ್ರಾಂತಿಗೆ ಅಹ್ವಾನ(ಮೌಢ್ಯ ಮೀರಿದ ಹೆಜ್ಜೆಯನ್ನರಸಿ) ಬಸವಣ್ಣ ಮತ್ತು ಅಂಬೇಡ್ಕರ: ಸಾಮಾಜಿಕ ಚಿಂತನೆಗಳು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ, ಬಸವಣ್ಣನವರು ಒಂದು ಕಡೆ ಸೀಮಿತವಾಗಿದ್ದಾರೆ. ಅದೇ ರೀತಿ ಡಾ. ಅಂಬೇಡ್ಕರ ಅವರನ್ನು ಕೂಡ ಸೀಮಿತವಾಗಿ ಇಡಲಾಗುತ್ತಿದೆ. ಮನು ವಿಚಾರಗಳು ನಮಲ್ಲಿ ನಮಗೆ ಗೊತ್ತಿಲ್ಲದ ಹಾಗೆ ತೂರಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು ಇಂದಿನ ಯುವಕರು ಉತ್ತಮ ಸಮಾಜಕ್ಕಾಗಿ ಶ್ರಮಿಸಬೇಕು. ಒಂದೇ ಧರ್ಮದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಒಂದು ದೇಶದಲ್ಲಿ ಒಂದೇ ಧರ್ಮವಿದ್ದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಏನು ನಡೆಯುತ್ತಿದೆ ಎನ್ನುವದು ಇಂದು ಕಾಣುತ್ತಿದ್ದೇವೆ. ನಮ್ಮ ದೇಶದಲ್ಲಿ ಅನೇಕ ಧರ್ಮಗಳು ಇವೆ. ಇತ್ತೀಚಿನ ದಿನಗಳಲ್ಲಿ ಹಿಂದು ದೇಶ ಎಂಬ ಘೋಷಣೆಯಾಗಬೇಕು ಎನ್ನುವ ಕೂಗು ಸರಿಯಲ್ಲ ಎಂದರು.
ವಿಶ್ವದ ಪ್ರಜ್ಞಾವಂತ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ ಅವರು ಎನ್ನುವದು ಸುಮ್ಮನೆ ಒಪ್ಪಿಕೊಳ್ಳುವ ವಿಷಯವಲ್ಲ. ಮನುವಾದಿಗಳ ಪಿತೂರಿಯಿಂದಾಗಿ ವಿಶ್ವಗುರು ಬಸವಣ್ಣ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ ವಿಚಾರಗಳು ಸೀಮಿತವಾಗುತ್ತಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಮಾತನಾಡಿ, ಬಸವಣ್ಣ ಹಾಗೂ ಡಾ. ಅಂಬೇಡ್ಕರ ಅವರ ಕಾಲ ಬೇರೆ ಬೇರೆಯಾಗಿದ್ದರೂ ಅವರ ವಿಚಾರಗಳು ಎರಡು ದೇಹ ಒಂದು ಆತ್ಮವಿದ್ಯಂತೆ ಎಂದರು. ಅಂದು ಬಸವಣ್ಣವರು ಸಮಾನತೆಗಾಗಿ ಸಾಹಿತ್ಯದ ಮೂಲಕ ಸಮಾಜ ಸುಧಾರಿಸಿದರು. ಡಾ. ಅಂಬೇಡ್ಕರ ಅವರು ಸಂವಿಧಾನದ ಮೂಲಕ ಅದನ್ನು ಜಾರಿಗೆ ತಂದಿದ್ದಾರೆ ಎಂದರು. ವಿದ್ಯಾರ್ಥಿಗಳು ತಮ್ಮ ಬಡಾವಣೆಗಳಲ್ಲಿ ಒಂದು ಗಿಡವನ್ನು ದತ್ತು ತೆಗೆದುಕೊಂಡು ಬೆಳೆಸಿ ಎಂದು ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಬೌದ್ಧ ಉಪಾಸಕ ಬಸವರಾಜ ಶಿವಕೇರಿ ಆಗಮಿಸಿದರು. ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕವಿತಾ ಪಾಟೀಲ ವಹಿಸಿದ್ದರು.
ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಅಂಡಗಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Comment