ಇಂಡೋನೇಷ್ಯಾ ಓಪನ್: ಸಿಂಧು, ಶ್ರೀಕಾಂತ್ ಶುಭಾರಂಭ

ಜಕಾರ್ತ, ಜು ೧೭- ಜಕಾರ್ತನಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ. ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಅವರು ಶುಭಾರಂಭ ಮಾಡಿದ್ದಾರೆ.

ಬಿಡಬ್ಲ್ಯುಎಫ್ ವಿಶ್ ಟೂರ್ ಸೂಪರ್ ೧೦೦೦ ಟೂರ್ನಿಯ ಇಂಡೋನೇಷ್ಯಾ ಓಪನ್‌ನ ಆರಂಭಿಕ ಸುತ್ತಿನಲ್ಲಿ ಗೆದ್ದು ಇಬ್ಬರು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇಂದು ಒಂದು ಗಂಟೆಗೂ ಅಧಿಕ ಸಮಯ ನಡೆದಿದ್ದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಕಾದಾಟದಲ್ಲಿ ಪಾರಮ್ಯ ಮೆರೆದ ಐದನೇ ಶ್ರೇಯಾಂಕಿತೆ ಸಿಂಧು ಅವರು ಜಪಾನ್‌ನ ಅಯಾ ಓಹೋರಿ ಅವರ ವಿರುದ್ಧ ೧೧-೨೧, ೨೧-೧೫, ೨೧-೧೫ ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಇನ್ನು, ೩೮ ನಿಮಿಷಗಳ ಕಾಲ ನಡೆದಿದ್ದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ೯ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ ಅವರು ಜಪಾನ್ನ ಕೆಂಟಾ ನಿಶಿಮೊಟಾ ಅವರ ವಿರುದ್ಧ ೨೧-೧೪, ೨೧-೧೩ ಅಂತರದಲ್ಲಿ ಗೆದ್ದು ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಭಾರತರ ಡಬಲ್ಸ್ ಜೋಡಿ ಮೊದಲ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿತ್ತು. ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಭಾರತದ ಪುರುಷರ ಡಬಲ್ಸ್ ಜೋಡಿಯು ಗೊಹ್ ಸ್ಜೆ ಫೀ ಮತ್ತು ನೂರ್ ಇ ಇಜ್ಜುದೀನ್ ಜೋಡಿ ವಿರುದ್ಧ ೨೧-೧೯, ೧೮-೨೧, ೨೧-೧೯ ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶ ಮಾಡಿತು. ಭಾರತದ ಜೋಡಿಯು ಎರಡನೇ ಸುತ್ತಿನಲ್ಲಿ ಇಂಡೋನೇಷ್ಯಾ ಅಗ್ರ ಜೋಡಿ ಮಾರ್ಕುಸ್ ಗಿಡೀನ್ ಮತ್ತು ಕೆವಿನ್ ಸಂಜಯ ಸುಕಮುಲ್ಜಿ ವಿರುದ್ಧ ಸೆಣಸಲಿದೆ.

Leave a Comment