ಇಂಜೆಕ್ಷನ್ ರಿಯಾಕ್ಷನ್: ರೋಗಿ ಚರ್ಮದ ಮೇಲೆ ಕಪ್ಪು ಮಚ್ಚೆ

ನಂಜನಗೂಡು. ಜು.11- ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಬಂದ ವ್ಯಕ್ತಿಗೆ ವೈದ್ಯರು ನೀಡಿದ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಚುಚ್ಚುಮದ್ದು ತೆಗೆದುಕೊಂಡ ವ್ಯಕ್ತಿಯ ಚರ್ಮದ ಮೇಲೆ ಕಪ್ಪು ಮಚ್ಚೆಗಳಯ ಕಾಣಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಂಜನಗೂಡಿನಲ್ಲಿ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬುವವರು ವಿಪರೀತ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ|| ಚಿದಾನಂದ ಮೂರ್ತಿಯವರ ಬಳಿ ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ವೈದ್ಯರು ಆತನನ್ನು ಪರೀಕ್ಷಿಸಿ ಚುಚ್ಚುಮದ್ದನ್ನು ನೀಡಿದರು. ಚುಚ್ಚುಮದ್ದು ನೀಡಿದ ಕೆಲಹೊತ್ತಿನಲ್ಲೇ ಅದು ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಸುರೇಶ ಮೈ ಚರ್ಮದ ಮೇಲೆ ಕಪ್ಪು ಬಣ್ಣದ ಮಚ್ಛೆಗಳು ಕಾಣಿಸಿಕೊಂಡವು. ಸುರೇಶನ ಈ ಪರಿಸ್ಥಿತಿಯನ್ನು ಗಮನಿಸಿದ ಹೋಟೆಲ್ ಮಾಲೀಕ ಮಂಜು ಕೂಡಲೇ ಸುರೇಶನಿಗೆ ಚಿಕಿತ್ಸೆ ನೀಡಿದ ಡಾ|| ಚಿದಾನಂದ ಮೂರ್ತಿಯವರನ್ನು ಸಂಪರ್ಕಿಸಿದಾಗ ಈ ಅಡ್ಡ ಪರಿಣಾಮಕ್ಕೆ ನಾನು ನೀಡಿದ ಚುಚ್ಚುಮದ್ದೇ ಕಾರಣ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡ ಡಾ|| ಚಿದಾನಂದ ಸುರೇಶನ ಆರೋಗ್ಯ ಪರಿಸ್ಥಿತಿಯ ಬಗ್ಗೆ ಖುದ್ದು ಆಸಕ್ತಿ ವಹಿಸುತ್ತೇನೆಂದು ತಿಳಿಸಿದ್ದಾರೆ. ಇದರಿಂದ ತೃಪ್ತರಾದ ಹೋಟೆಲ್ ಮಾಲೀಕ ಮಂಜು ಡಾ|| ಚಿದಾನಂದ ಮೂರ್ತಿಯವರ ವಿರುದ್ದ ದೂರು ದಾಖಲಿಸಿಲ್ಲ.

Leave a Comment