ಇಂಜಿನವಾರಿ ಗ್ರಾಮದಲ್ಲಿ ಮಕ್ಕಳ ಮೇಲೆ ಕಲ್ಲು : ಭಯದಲ್ಲಿ ವಿದ್ಯಾರ್ಥಿಗಳು : ಭಾನಾಮತಿ ಶಂಕೆ

ಗುಳೇದಗುಡ್ಡ ಸೆ.12 : ಸಮೀಪದ ಇಂಜಿನವಾರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಡುಗೆ ಸಹಾಯಕರಿಗೆ ಹೀಗೆ ಎಲ್ಲರ ಮೇಲೆ ಇದ್ದಕ್ಕಿದ್ದ ಹಾಗೆ ಕಲ್ಲು ಬೀಳುತ್ತಿವೆ. ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಆತಂಕಕ್ಕೀಡು ಮಾಡಿದೆ.
ಕಳೆದ ಒಂದು ತಿಂಗಳಿಂದ ಈ ರೀತಿ ಘಟನೆ ನಡೆಯುತ್ತಿದ್ದು, ಶಾಲೆಯಲ್ಲಿ ಮಕ್ಕಳಿಗೆ ಅಷ್ಟೆ ಅಲ್ಲದೇ ಶಾಲೆಯಲ್ಲಿನ ಹಲವು ಶಿಕ್ಷಕರಿಗೆ, ಅಡುಗೆ ಸಹಾಯಕರಿಗೂ ಕಲ್ಲು ಬಿದ್ದ ಘಟನೆ ನಡೆದಿದೆ. ಶಾಲೆಯಲ್ಲಿ ಕುಳಿತ ಕೆಲವು ವಿದ್ಯಾರ್ಥಿಗಳಿಗೆ ಕಲ್ಲು ಬಡಿದಿದ್ದರಿಂದ ತಲೆಗೆ ಪೆಟ್ಟು ಬಿದ್ದು ಗಾಯವಾಗಿದೆ.
ಶಾಲೆಯ ಮಕ್ಕಳು ಶಾಲೆ ಬಿಟ್ಟು ಬೇರೆಡೆ ಕುಳಿತರೂ ಅಲ್ಲಿಯೂ ಕಲ್ಲು ಬೀಳುತ್ತಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಗ್ರಾಮದ ಹನಮಪ್ಪನ ಗುಡಿ ಹಾಗೂ ಒಪ್ಪತ್ತೇಶ್ವರ ದೇವಸ್ಥಾನದಲ್ಲಿ ಮಕ್ಕಳನ್ನು ಕೂಡ್ರಿಸಿ ಪಾಠ ಮಾಡುತ್ತಿದ್ದರೂ ಅಲ್ಲಿಯೂ ಕಲ್ಲು ಬಿದ್ದಿವೆ. ಇನ್ನೂ ವಿಶೇಷ ಎಂದರೆ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆಯೇ ಹೆಚ್ಚು ಕಲ್ಲು ಬೀಳುತ್ತಿವೆ. ವಿದ್ಯಾರ್ಥಿಗಳು ಎಲ್ಲಿ ಹೋದರೂ ಅಲ್ಲಿಯೇ ಕಲ್ಲು ಬೀಳುತ್ತಿವೆ ಇದನ್ನು ಗಮನಿಸಿದ ಪಾಲಕರು, ಶಿಕ್ಷಕರು ಮತ್ತಷ್ಟು ಭಯಗೊಂಡಿದ್ದಾರೆ.
ಶಾಲೆಯಲ್ಲಿ ಕಲ್ಲು ಬೀಳುತ್ತಿವೆ ಎಂಬ ಕಾರಣವಾಗಿ ಗ್ರಾಮದ ದೇವಸ್ಥಾನದಲ್ಲಿ ಪಾಠ ಭೋಧನೆಗೆ ತೆರಳಿದರೂ ಅಲ್ಲಿಯೂ ಅಚ್ಚರಿ ರೀತಿಯಲ್ಲಿ ಕಲ್ಲು ಬಿದ್ದಿವೆ. ಶಿಕ್ಷಕರ ಪಕ್ಕದಲ್ಲಿಯೇ ಕುಳಿತ ಅರ್ಚನಾ ಮತ್ತು ಸಂಜನಾ ಎಂಬ ಎರಡು ವಿದ್ಯಾರ್ಥಿಗಳ ಮೇಲೆ ಕಲ್ಲು ಬಿದ್ದಾಗ ಎಲ್ಲ ವಿದ್ಯಾರ್ಥಿಗಳು ಮತ್ತಷ್ಟು ಭಯಬೀತರಾಗಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ವಿದ್ಯಾರ್ಥಿಗಳ ಮೇಲೆ ಬಿದ್ದ ಹಾಗೆ ಹಲವು ಬಾರಿ ಶಾಲೆಯ ಶಿಕ್ಷಕರಿಗೆ ಹಾಗೂ ಶಾಲೆಯಲ್ಲಿನ ಅಡುಗೆ ಸಹಾಯಕರಿಗೂ ಕಲ್ಲು ಬಿದ್ದಿವೆ ಎನ್ನಲಾಗಿದೆ. ಇದರಿಂದ ಗ್ರಾಮದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಭಯ ಪಡುತ್ತಿದ್ದಾರೆ.
ಗ್ರಾಮದ ಶಾಲೆಯಲ್ಲಿ ಮಕ್ಕಳ ಮೇಲೆ ಕಳೆದ ಒಂದು ತಿಂಗಳಿಂದ ಇದ್ದಕ್ಕಿದ್ದ ಹಾಗೆ ಕಲ್ಲು ಬೀಳುತ್ತಿವೆ. ಕಲ್ಲಿನಿಂದ ಪೆಟ್ಟು ತಿಂದ ಮಕ್ಕಳ ತಲೆ, ಕೈಗೆ ಗಾಯವಾದರೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಬಂದಿಲ್ಲ. ಗ್ರಾಮದಲ್ಲಿ ಈ ರೀತಿಯಾದ ಅವಗಡ ನಡೆಯುತ್ತಿದ್ದರೂ ಶಿಕ್ಷಣಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಕ್ಕೆ ಅಧಿಕಾರಿಗಳು ಬಂದು ವಸ್ತು ಸ್ಥಿತಿ ತಿಳಿದುಕೊಳ್ಳಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿ ಅಚ್ಚರಿಯಾಗಿ ಕಲ್ಲು ಬೀಳುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೆಟು ಹಾಕುತ್ತಿದ್ದಾರೆ. ಈ ರೀತಿಯಲ್ಲಿ ಮಕ್ಕಳ ಹಾಗೂ ಶಿಕ್ಷಕರ ಮೇಲೆ ಇದ್ದಕ್ಕಿದ್ದ ಹಾಗೆ ಕಲ್ಲು ಬೀಳುವುದು ಭಾನಾಮತಿ ಎಂದು ಶಂಕಿಸಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ:
ಶಾಲೆಯಲ್ಲಿ ಮಕ್ಕಳ ಮೇಲೆ ಕಲ್ಲು ಬೀಳುತ್ತಿರುವುದು ನಮಗೆ ಭಯ ಮೂಡಿಸಿದೆ. ಕಲ್ಲು ಬೀಳುವುದನ್ನು ನೋಡಬೇಕೆಂದು ಪರೀಕ್ಷೆಗಾಗಿ ಮಕ್ಕಳನ್ನು ಬೇರೆಡೆ ಕುಂದ್ರಿಸಿದಾಗಲೂ ಮಕ್ಕಳಿಗೆ ಕಲ್ಲು ಬಿದ್ದಿವೆ. ಕೇವಲ 10 ನಿಮಿಷದಲ್ಲಿ ಕಲ್ಲು ಬೀಳುತ್ತಿವೆ. ಶಾಲೆಯಲ್ಲಿ ಮಕ್ಕಳ ಮೇಲೆ ಈ ರೀತಿಯಾಗಿ ಇದ್ದಕ್ಕಿದ್ದ ಹಾಗೆ ಕಲ್ಲು ಬೀಳುತ್ತಿರುವ ಕಾರಣ ಮಕ್ಕಳು ಭಯಗೊಂಡಿದ್ದಾರೆ. ಇದರಿಂದ ಅನೇಕ ಮಕ್ಕಳಿಗೆ ಜ್ವರ ಬಂದಿವೆ. ಕಲ್ಲು ಎಲ್ಲಿಂದ ಬರುತ್ತಿವೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. ಇದು ಶಿಕ್ಷಕರಿಗೆ, ಮಕ್ಕಳಿಗೆ, ಪಾಲಕರಿಗೆ ವಿಚಿತ್ರ ಕಾಟವಾಗಿದೆ.
ಗ್ರಾಮದಲ್ಲಿ ಈ ರೀತಿಯಲ್ಲಿ ಮಕ್ಕಳ ಮೇಲೆ ಅಚ್ಚರಿಯಾಗಿ ಕಲ್ಲು ಬೀಳುತ್ತಿರುವುದು ಗೊತ್ತಾಗಿದೆ. ಪೊಲೀಸ್ ಇಲಾಖೆಯಿಂದ ಗ್ರಾಮದಲ್ಲಿ ರಕ್ಷಣೆ ದೃಷ್ಟಿಯಿಂದ ತಾವು ಸಂಪೂರ್ಣ ಸಹಕಾರ  ನೀಡುವುದಾಗಿ ಪಿಎಸ್‍ಆಯ್ ಬಸವರಾಜ ಲಮಾಣಿ ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕಲ್ಲು ಬೀಳುತ್ತಿವೆ. ಇದರ ಪರಿಣಾಮವಾಗಿ ಹಲವರಿಗೆ ಗಾಯವಾಗಿವೆ. ಕೆಲವು ಮಕ್ಕಳು ಹೆದರಿ ಅವರಿಗೆ ಜ್ವರ ಬಂದಿವೆ. ಆದ ಕಾರಣ ಮಕ್ಕಳ ಹಿತದೃಷ್ಠಿಯಿಂದ ಶಾಲೆಗೆ ನಾಲ್ಕು ದಿನ ರಜೆ ಕೊಡಬೇಕು ಎಂದು ಶಾಲೆಯ ಮುಖ್ಯಗುರುಗಳು ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಅದಕ್ಕೆ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿ ಮನವಿಗೆ ಸಹಿ ಮಾಡಿದ್ದಾರೆ.

Leave a Comment