ಆ.6 ಡಿ.ಎಸ್ ಎಸ್. ಮಹಾ ಱ್ಯಾಲಿ

(ನಮ್ಮ ಪ್ರತಿನಿಧಿಗಳಿಂದ)
ಬೆಂಗಳೂರು, ಆ. ೧- ದಲಿತ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಆ.6ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾಱ್ಯಾಲಿ ನಡೆಸಲು ನಿರ್ಧರಿಸಿದೆ.
ದಲಿತ ಹಕ್ಕುಗಳ ರಕ್ಷಣಾ ಮಹಾಱ್ಯಾಲಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ದಲಿತ ಸಮುದಾಯದವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪುರಭವನದಿಂದ ಫ್ರೀಡಂಪಾರ್ಕ್‌ವರೆಗೆ ಈ ಮಹಾಱ್ಯಾಲಿ ನಡೆಸುವ ಮೂಲಕ ದಲಿತ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಲಾಗುವುದು. ನಂತರ 2 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ದಲಿತರ ಕಾನೂನುಗಳಿಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿದ್ದು, ಇದನ್ನು ವಿರೋಧಿಸಿ ನಡೆಸಿದ ಹೋರಾಟದಲ್ಲಿ 9 ಜನ ದಲಿತರು ಬಲಿಯಾಗಿದ್ದಾರೆ. ಇನ್ನು ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನ ಬದ್ಧ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ನ್ಯಾಯಾಲಯದ ಮೂಲಕ ನಿರಾಕರಿಸುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣಮಾಡಿದೆ ಎಂದು ಆರೋಪಿಸಿದರು.
ದೌರ್ಜನ್ಯ ವಿರೋಧಿ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿ ಸುಪ್ರೀಂ ಆದೇಶಕ್ಕೆ ಪರ್ಯಾಯವಾಗಿ ತಿದ್ದುಪಡಿ ತಂದು ಕಾಯ್ದೆಯನ್ನು ಬಲಪಡಿಸಬೇಕು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು. ಪರಿಶಿಷ್ಠ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಸಂವಿಧಾನ ತಿದ್ದುಪಡಿಯನ್ನು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಮಂಡಿಸಿ ಅನುಷ್ಠಾನಗೊಳಿಸಬೇಕು. ಸಾಚಾರ್ ಸಮಿತಿ ವರದಿ ಜಾರಿಮಾಡಬೇಕು. ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಕರ್ನಾಟಕ ಶಾಶ್ವತ ಹಿಂದುಳಿದ ಜಾತಿಗಳ ಆಯೋಗದ ಸಮೀಕ್ಷೆ ವರದಿಯನ್ನು ಜಾರಿಮಾಡಬೇಕು. ನಿವೇಶನ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಬೇಕು. ಭೂಸುಧಾರಣೆ ಕಾಯ್ದೆ ಅನ್ವಯ ಪರಿಶಿಷ್ಠರಿಗೆ ಮತ್ತು ಅರಣ್ಯ ವಾಸಿಗರಿಗೆ ಐದು ಎಕರೆ ಭೂಮಿ ನೀಡಬೇಕು. ಬ್ಯಾಕ್‌ಲಾಗ್ ಹುದ್ಧೆಗಳ ಭರ್ತಿಗೆ ಸುಗ್ರೀವಾಜ್ಞೆ ಹೊರಡಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ವೇದಿಕೆಯಲ್ಲಿ ಪದಾಧಿಕಾರಿಗಳಾದ ಜ್ಯೋತಪ್ಪ ಹೊಸಳ್ಳಿ, ಇಂದಿರಾಕೃಷ್ಣಪ್ಪ, ನೆರಳೂರು ಮುನಿಕೃಷ್ಣಪ್ಪ, ಸಿದ್ದಾರ್ಥ ಶ್ರೀನಿವಾಸ್, ಮಂಜುನಾಥ್, ಮುನಿಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Comment