ಆ. 20 ರಿಂದ ಜೆಡಿಎಸ್ ಪಾದಯಾತ್ರೆ : ಪಕ್ಷ ಸಂಘಟನೆ ಉದ್ದೇಶ, ಸರ್ಕಾರಕ್ಕೆ ಧಕ್ಕೆಯಿಲ್ಲ-ದೇವೇಗೌಡ ಸ್ಪಷ್ಟನೆ

ಬೆಂಗಳೂರು, ಜೂ. ೩೦- ಜೆಡಿಎಸ್ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಿಂದ ಬಲಪಡಿಸುವ ಏಕೈಕ ಉದ್ದೇಶದಿಂದ ಆ. 20 ರಿಂದ ರಾಜ್ಯಾದ್ಯಂತ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ. ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರಕ್ಕೆ ಧಕ್ಕೆ ಮಾಡುವ ಅಥವಾ ಕಾಂಗ್ರೆಸ್ ನಾಯಕರಲ್ಲಿ ಅಧೈರ್ಯವುಂಟು ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ ಎಂದು ಪಕ್ಷದ ಸರ್ವೋಚ್ಛ ನಾಯಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಂದಿಲ್ಲಿ ತಿಳಿಸಿದರು.

  •  ಜೆಡಿಎಸ್ ಬಲವರ್ಧನೆಗೆ ಆ. 20 ರಿಂದ ಪಾದಯಾತ್ರೆ.
  •  ಪಾದಯಾತ್ರೆಗೆ ದೇವೇಗೌಡರದ್ದೇ ನೇತೃತ್ವ.
  •  ದೋಸ್ತಿ ಸರ್ಕಾರಕ್ಕೆ ಧಕ್ಕೆಯುಂಟಾಗದಂತೆ ಎಚ್ಚರಿಕೆ.
  •  ಕಾಂಗ್ರೆಸ್ ನಾಯಕರಲ್ಲಿ ಅಧೈರ್ಯ ತುಂಬುವ ಉದ್ದೇಶವಿಲ್ಲ.
  •  ಕುಮಾರಸ್ವಾಮಿ ಅಮೆರಿಕ ಪ್ರವಾಸಕ್ಕೆ ಬಿಜೆಪಿ ನಾಯಕರ ಅನುಮತಿ ಪಡೆಯಬೇಕಿತ್ತೇ? ಎಂದು ಸಿಡಿಮಿಡಿ.

ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ದೇವೇಗೌಡ, ಪಕ್ಷದ ಸಂಘಟನೆ ಮಾಡುವ ಮಹತ್ವದ ಜವಾಬ್ದಾರಿಯನ್ನು ತಾವೇ ಮುಂದೆ ನಿಂತು ಮಾಡಲು ತೀರ್ಮಾನಿಸಿದ್ದೇನೆ. ಪಾದಯಾತ್ರೆಯಿಂದಾಗಿ ದೋಸ್ತಿ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆವುಂಟಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.

ರಾಜ್ಯವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಬಹುದೆಂಬ ಹಿನ್ನೆಲೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿರುವ ದೇವೇಗೌಡರು, ಅವರು ಏನು ಬೇಕಾದರೂ ತಿಳಿದುಕೊಳ್ಳಲಿ ಪಕ್ಷದ ಸಂಘಟನೆ ಬಲಪಡಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹಿನ್ನೆಡೆಯುಂಟಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿ, ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುವಂತೆ ಮಾಡುವುದು ಪಾದಯಾತ್ರೆಯ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಪಾದಯಾತ್ರೆ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರನ್ನು ಭೇಟಿ ಮಾಡುವ ಅವಕಾಶ ದೊರೆಯಲಿದ್ದು, ಮುಂಬರುವ ದಿನಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಬಿಜೆಪಿ ಟೀಕೆಗೆ ಸಿಡಿಮಿಡಿ
ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಿಸಲಿರುವ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಭೂಮಿಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ಆದಿಚುಂಚನಗಿರಿ ಮಠದ ಆಹ್ವಾನದ ಮೇರೆಗೆ ಅಮೆರಿಕಾ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ನಿರ್ಧಾರದ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ದೇವೇಗೌಡರು ಸಿಡಿಮಿಡಿಗೊಂಡಿದ್ದಾರೆ.

ದೇವಸ್ಥಾನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಕುಮಾರಸ್ವಾಮಿ ಬಿಜೆಪಿ ನಾಯಕರಾದ ಯಡಿಯೂರಪ್ಪ, ಈಶ್ವರಪ್ಪ ಅವರ ಅನುಮತಿ ಪಡೆಯಬೇಕಿತ್ತೇ? ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿಯವರು ಯಾರ ದುಡ್ಡಿನಿಂದಲೂ ವಿದೇಶ ಪ್ರವಾಸಕ್ಕೆ ಹೋಗಿಲ್ಲ, ಈ ಪ್ರವಾಸಕ್ಕೆ ಸರ್ಕಾರದ ಹಣ ಬಳಕೆ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ಸಮಾಲೋಚನೆ
ಇದೇ ಸಂದರ್ಭದಲ್ಲಿ ದೇವೇಗೌಡರು .ಮುಂದಿನ ವರ್ಷ ನಡೆಯಲಿರುವ ಬಿಬಿಎಂಪಿ ಚುನಾವಣೆ ಎದುರಿಸುವ ಕುರಿತಂತೆ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕ ಗೋಪಾಲಯ್ಯ, ಬೆಂಗಳೂರು ನಗರಘಟಕದ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಹಾಗೂ ಬಿಬಿಎಂಪಿ ಸದಸ್ಯರು ಭಾಗವಹಿಸಿದ್ದರು.

 

Leave a Comment