ಆ.15- ಸೆ.10 ಸಿದ್ಧಾಂತ ಶಿಖಾಮಣಿ ಪ್ರವಚನ

 ಜಗದ್ಗುರು ನಡೆ, ರೈತರ ಕಡೆ ಅಭಿಯಾನ
ರಾಯಚೂರು.ಆ.12- ಶ್ರಾವಣ ಮಾಸ ನಿಮಿತ್ಯ ಆ.15 ರಿಂದ ಸತತ 24 ದಿನಗಳ ಕಾಲ ಲಿಂಗಸೂಗೂರು ಪಟ್ಟಣದ ಶ್ರೀ ಈಶ್ವರ ದೇವಸ್ಥಾನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮ ಸೇರಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಜಗದ್ಗುರುಗಳ ನಡೆ ರೈತರ ಕಡೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವರಭೂಪೂರ ತೋಪಿನಕಟ್ಟಿ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಶ್ರಾವಣ ಮಾಸ ನಿಮಿತ್ಯ ಲಿಂಗಸೂಗೂರು ಪಟ್ಟಣದ ಶ್ರೀ ಈಶ್ವರ ದೇವಸ್ಥಾನದಲ್ಲಿ ಕಾಶಿ ಪೀಠದ ಜ್ಞಾನ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರಿಂದ ಶ್ರೀ ದಿ ರೇಣುಕಾಚಾರ್ಯ ಅಗಸ್ತ್ಯ ಮುನಿಗಳಿಗೆ ಬೋಧಿಸಿದ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶಿರ್ವಚನ ಕಾರ್ಯಕ್ರಮಕ್ಕೆ ಆ.15 ರಿಂದ ಚಾಲನೆ ನೀಡಲಾಗುವುದು ಪ್ರತಿದಿನ ಸಂಜೆ 6.30 ಕ್ಕೆ ಪ್ರವಚನ ಕಾರ್ಯಕ್ರಮದೊಂದಿಗೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ.
ಶ್ರೀಗಳ ಮಹದಾಸೆಯಂತೆ ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮಸ್ಥೈರ್ಯ ತುಂಬುವ ಜಗದ್ಗುರುಗಳ ನಡೆ ರೈತರ ಕಡೆ ಎನ್ನುವ ವಿನೂತನ ಜಾಗೃತಿ ಅಭಿಯಾನಕ್ಕೆ ಶ್ರೀಗಳಿಂದ ವಿದ್ಯುಕ್ತ ಚಾಲನೆ ನೀಡಲಾಗುವುದು. ಲಿಂಗಸೂಗೂರು ವ್ಯಾಪ್ತಿಗೊಳಪಡುವ ಒಟ್ಟು 22 ಗ್ರಾಮಕ್ಕೆ ತೆರಳಿ ಕೃಷಿಕ ವರ್ಗಕ್ಕೆ ಆತ್ಮಸ್ಥೈರ್ಯ ತುಂಬಲಾಗುವುದು. ಡಾ.ಚಂದ್ರಶೇಖರ ಶಿವಾಚಾರ್ಯ ಮಹಾ ಭಗವತ್ ಪಾದಕರ 72 ನೇ ಹುಟ್ಟು ಹಬ್ಬ ನಿಮಿತ್ಯ ಆ.23 ರಂದು ಬೆಳಿಗ್ಗೆ 6 ಗಂಟೆ ರುದ್ರಾಭಿಷೇಕ, ದಿ.31 ರಂದು ಉಡಿತುಂಬುವ ಕಾರ್ಯಕ್ರಮ, ಸೆ.10 ರಂದು ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಸದ್ಭಕ್ತ ಮಂಡಳಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಶ್ರೀವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನಂದಿಕೋಲಮಠ ಇನ್ನಿತರರು ಉಪಸ್ಥಿತರಿದ್ದರು.

Leave a Comment