ಆ.14 ಬೃಹತ್ ಪಂಜಿನ ಮೆರವಣಿಗೆ

ರಾಯಚೂರು.ಆ.12- ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ಅಂಗೀಕರಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆ.14 ರಂದು ಸಂಜೆ 5 ಗಂಟೆಗೆ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ಕಾಕರಗಲ್ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಯಥಾವತ್ ಅಂಗೀಕರಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಹಿಂಬಡ್ತಿ ಪಡೆದ ಎಲ್ಲಾ ನೌಕರರನ್ನು ಸುಗ್ರೀವಾಜ್ಞೆ ಅನ್ವಯ ಮುಂಬಡ್ತಿ ಹುದ್ದೆಗೆ ಮುಂದುವರೆಸಬೇಕು. 1989 ರ ಪರಿಶಿಷ್ಟ ಜಾತಿ, ಪಂಗಡ ಸಮುದಾಯದ ದೌರ್ಜನ್ಯ ತಡೆ ಕಾಯ್ದೆ ಯಥಾವತ್ ಮುಂದುವರೆಸಿ, ಪರಿಶಿಷ್ಟ ಪಂಗಡ ಸಮುದಾಯಕ್ಕಿರುವ ಮೀಸಲಾತಿಯನ್ನು ಶೇ.7 ಕ್ಕೆ ವಿಸ್ತರಿಸಬೇಕು.
ಸಾಮಾಜಿಕ, ಶೋಷಣೆಗೊಳಗಾಗಿರುವ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಕಾನೂನು ಕಾಯ್ದೆ ಹತ್ತಿಕ್ಕುವ ಸುಪ್ರೀಂ ಕೋರ್ಟ್ ಆದೇಶಕ್ಕೆ ತಡೆಹಾಕಿ ಶೋಷಿತರಿಗೆ ರಕ್ಷಣ ನೀಡಬೇಕು. ಭೂ ಮಂಜೂರಾತಿ ಪ್ರಕರಣದಲ್ಲಿ ಪರಿಶಿಷ್ಟರಿಗೆ ಶೇ.50ರ ಜಮೀನು ಮಂಜೂರಿ ಮಾಡಿ ಎಸ್‌ಸಿಪಿ, ಟಿಎಸ್‌‌ಪಿ ಯೋಜನೆ ಅನುದಾನ ದುರುಪಯೋಗಕ್ಕೆ ಕಡಿವಾಣ ಹಾಕಬೇಕು. ಬಗರ್ ಹುಕುಂ ಸಾಗುವಳಿ ಖಾಯಂ ಸಾಗುವಳಿ ಚೀಟಿ ನೀಡಿ, ಖಾಸಗೀ ಕ್ಷೇತ್ರದ ಉದ್ಯೋಗ ಮೀಸಲಾತಿ ಅನುಷ್ಠಾನಗೊಳಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಕೆಗಾಗಿ ಅಂದು ಸಂಜೆ 5 ಗಂಟೆಗೆ ನಗರದ ಡಾ.ಬಿ.,ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ವರೆಗೆ ಬೃಹತ್ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ. ದಲಿತ ಸಮುದಾಯ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಸಮಿತಿ ಸಂಚಾಲಕರು ಹನುಮಂತಪ್ಪ, ಚಿನ್ನಪ್ಪ ಪಟ್ಟದಕಲ್, ನಲ್ಲಾರೆಡ್ಡಿ ನಾಯಕ, ಮಹಾದೇವ ಧುವತಿ, ಬೂದೆಪ್ಪ ಮ್ಯಾತ್ರಿ, ಮಲ್ಲಯ್ಯ, ಮಹಾದೇವ್, ಲಾಜರ್ ನ್ನಿತರರು ಉಪಸ್ಥಿತರಿದ್ದರು.

Leave a Comment