ಆ.13ರಂದು ಮತ್ತೊಮ್ಮೆ ದಿಗ್ವಿಜಯ ಶೋಭಾಯಾತ್ರೆ

ಕಲಬುರಗಿ,ಆ.11- ಅಮೇರಿಕೆಯ ಚಿಕಾಗೊದಲ್ಲಿ ನಡೆದ ಸರ್ಮಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಹಿಂದೂ ಧರ್ಮ ಜಗತ್ತಿಗೆ ನೀಡಿದ ಕೊಡುಗೆ ಬಗ್ಗೆ ಸ್ವಾಮಿ ವಿವೇಕಾನಂದರು ಮಾಡಿರುವ ಭಾಷಣಕ್ಕೆ 125 ವಸಂತಗಳು ತುಂಬುತ್ತಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ದಿಗ್ವಿಜಯ ಎಂಬ ರಥಯಾತ್ರೆಯನ್ನು ಯುವಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ನೇತೃತ್ವದಲ್ಲಿ ಸಂಘಟಿಸಲಾಗಿದೆ.

ಯುವಾಬ್ರಿಗೇಡ್ ವಿಭಾಗೀಯ ಸಂಚಾಲಕ ಶ್ರೀನಿವಾಸ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಯಮತ್ತುರಿನಿಂದ ಪ್ರಾರಂಭವಾದ ಈ ರಥಯಾತ್ರೆ ಆ.13ರಂದು ಕಲಬುರಗಿಯಲ್ಲಿ ಜರುಗಲಿದ್ದು, ಆಕ್ಟೋಬರ 28ಕ್ಕೆ ಇಲಕಲ್ ನಲ್ಲಿ ಸಮಾರೋಪ ಗೊಳ್ಳಲಿದೆ ಎಂದು ಹೇಳಿದರು.

ಆ.13ರ ಬೆಳಿಗ್ಗೆ 9ಕ್ಕೆ ನಗರದ ಶ್ರೀಶರಣಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಶೋಭಾಯಾತ್ರೆಗೆ ಪೂಜ್ಯ ಡಾ.ಶರಣಬಸಪ್ಪಾ ಅಪ್ಪಾಜಿ ಹಾಗೂ ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ಅವರು ಚಾಲನೆ ನೀಡುವರು, ಈ ಶೋಭಾ ಯಾತ್ರೆ ಕಾರ್ಯಕ್ರಮ ನಡೆಯುವ ಡಾ.ಎಸ್.ಎಂ.ಪಂಡಿತ ರಂಗಮಂದಿರಕ್ಕೆ ಹೊರಡಲಿದೆ ಎಂದರು.

ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಮತ್ತೊಮ್ಮೆ ದಿಗ್ವಿಜಯ ಕಾರ್ಯಕ್ರಮದ ಸಾನಿಧ್ಯವನ್ನು ಸ್ವಾಮಿ ಮಹೇಶ್ವರಾನಂದಜಿ ಮಹಾರಾಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಸವರಾಜ ಪಾಟೀಲ ಸೇಡಂ ಪಾಲ್ಗೊಳ್ಳಲಿದ್ದಾರೆ. ವಿಶೇಷ ಭಾಷಣಕಾರರಾಗಿ ಡಾ.ವೀಣಾ ಬನ್ನಂಜೆ ಮತ್ತು ನಿತ್ಯಾನಂದ ವಿವೇಕವಂಶಿ ಅವರು ಆಗಮಿಸಲಿದ್ದಾರೆ.

ಶೋಭಾಯಾತ್ರೆಯಲ್ಲಿ 650 ಜನ ಸ್ವಾಮಿ ವಿವೇಕಾನಂದರ ವೇಷಧಾರಿಗಳು, 25 ಜನರ ಕುಂಬಮೇಳ, 2-3 ಕೊಲಾಟ ತಂಡಗಳು ಹಾಗೂ ವಿದ್ಯಾರ್ಥಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ, ಬಸವರಾಜ ಸೇರಿದಂತೆ ಇತರರಿದ್ದರು..

Leave a Comment