ಆಸ್ಪತ್ರೆಗೆ ನುಗ್ಗಿ ತಂಡದಿಂದ ದಾಂಧಲೆ

ಕಾಸರಗೋಡು, ಸೆ.೨೩- ಯುವಕರ ತಂಡ ಖಾಸಗಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಿನ್ನೆ ರಾತ್ರಿ ನಗರದ ಹೊರವಲಯದ ನುಳ್ಳಿಪ್ಪಾಡಿ ಎಂಬಲ್ಲಿ ನಡೆದಿದೆ. ತಂಡವು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿ ರೋಗಿಗಳು ಮತ್ತು ಸಿಬಂದಿಯ ಮೇಲೆ ಹಲ್ಲೆ ನಡೆಸಿದೆ. ಗಾಜು, ಪೀಠೋಪಕರಣ ಹಾಗೂ ಇತರ ವಸ್ತುಗಳಿಗೆ ಹಾನಿ ಎಸಗಿದ್ದಾರೆ. ಕೊಲೆ ಪ್ರಕರಣವೊಂದರ ಆರೋಪಿ ನೇತೃತ್ವದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ದಾಂಧಲೆಯಿಂದ ರೋಗಿಗಳು ಹಾಗೂ ಸಿಬಂದಿ ಭಯಭೀತರಾಗಿ ಓಡಿದ್ದಾರೆ. ಬೈಕ್ ಅಪಘಾತವೊಂದರಲ್ಲಿ ಗಾಯಗೊಂಡ ಇಬ್ಬರನ್ನು ರಾತ್ರಿಯ ವೇಳೆ ಕೊಲೆ ಆರೋಪಿ ಮತ್ತಾತನ ಸಹಚರರಿದ್ದ ತಂಡ ಆಸ್ಪತ್ರೆಗೆ ತಂದಿತ್ತು. ಈ ವೇಳೆ ತಂಡವು ಕೃತ್ಯವೆಸಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಜುಗಳನ್ನು ಹುಡಿ ಮಾಡಿದ ತಂಡ ಆಸ್ಪತ್ರೆಯುದ್ದಕ್ಕೂ ಕೈಗೆ ಸಿಕ್ಕ ವಸ್ತುಗಳನ್ನು ಎಸೆದು ಹಾನಿಗೊಳಿಸಿತು. ನಗರ ಠಾಣಾ ಪೊಲೀಸರು ಆಸ್ಪತ್ರೆಗೆ ತಲಪುವಷ್ಟರಲ್ಲಿ ತಂಡವು ಪರಾರಿಯಾಗಿದೆ. ಸ್ಥಳದಲ್ಲಿ ಜಮಾಯಿಸಿದ್ದ ಗುಂಪನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಕೆಎಸ್‌ಡಿ

Leave a Comment