ಆಸ್ಪತ್ರೆಗೆ ಡಿಸಿ ದಿಢೀರ್ ಭೇಟಿ ವೈದ್ಯರಿಗೆ ತರಾಟೆ

ಬೆಂಗಳೂರು, ಜೂ ೧೮- ಕೆ.ಆರ್.ಪುರಂ. ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್ ಅವರು ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧ ಮತ್ತು ಮಾತ್ರೆಗಳನ್ನು ರೋಗಿಗಳಿಗೆ ವಿತರಿಸುತ್ತಿರುವುದನ್ನು ಪತ್ತೆ ಹಚ್ಚಿ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲು ಆದೇಶಿಸಿದ್ದಾರೆ.
ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ನೂರಾರು ಮಂದಿ ರೋಗಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರಿಗೆ ನೀಡಿದ ಔಷಧ, ಮಾತ್ರೆಗಳು ಮತ್ತು ಶಕ್ತಿವರ್ಧಕ ಟಾನಿಕ್ ಗಳನ್ನು ಪರಿಶೀಲಿಸಿದಾಗ ಅವುಗಳು ಅವಧಿ ಮೀರಿದ್ದು ಪತ್ತೆಯಾಯಿತು.
ಅವಧಿ ಮೀರಿದ ಮಾತ್ರೆಗಳನ್ನು ರೋಗಿಗಳಿಗೆ ನೀಡುತ್ತಿರುವ ವೈದ್ಯರ ವಿರುದ್ಧ ಗರಂ ಆದ ಜಿಲ್ಲಾಧಿಕಾರಿಗಳು ಸುಮಾರು 15ಕ್ಕೂ ಹೆಚ್ಚು ಔಷಧ ಸಂಗ್ರಹಿಸಿದ ಬಾಕ್ಸ್ ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಈ ಬಾಕ್ಸ್ ನಲ್ಲಿದ ಔಷಧ ಮತ್ತು ಮಾತ್ರೆಗಳನ್ನು ಪರಿಶೀಲಿಸಿದಾಗ ಅವಧಿ ಮೀರಿದ್ದವು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್ ಅವರು ತಹಶೀಲ್ದಾರ್ ಕಚೇರಿಗೆ ತೆರಳಿದಾಗ ಕಳೆದ ಮೂರು ದಿನಗಳಿಂದ ಗ್ರೇಡ್ 2 ತಹಶೀಲ್ದಾರ್ ಶಾರದಮ್ಮ ಅವರು ಕಚೇರಿಗೆ ಗೈರು ಹಾಜರಾಗುವ ಬಗ್ಗೆ ಮಾಹಿತಿಯನ್ನು ಪಡೆದರು. ಕಳೆದ 3 ದಿನಗಳಿಂದ ಯಾವುದೇ ಮಾಹಿತಿಯನ್ನು ನೀಡದೆ ತಹಶೀಲ್ದಾರ್ ಅವರು ಕಚೇರಿಗೆ ಹಾಜರಾಗಿರಲಿಲ್ಲ.
ಕಚೇರಿಯಲ್ಲಿ ಹಾಜರಿದ್ದ ನೂರಾರು ಮಂದಿ ಸಾರ್ವಜನಿಕರು ನಮ್ಮ ಕೆಲಸಗಳೇ ಆಗುತ್ತಿಲ್ಲ ಯಾರು ಹೇಳುವವರು ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿಗಳ ಎದುರು ದೂರು ಸಲ್ಲಿಸಿದರು.
ತಕ್ಷಣವೇ ಜಿಲ್ಲಾಧಿಕಾರಿಗಳು ಶಾರದಮ್ಮ ಅವರ ಮೊಬೈಲ್ ನಂಬರ್ ಗೆ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಸಿಟ್ಟಿಗೆದ ಜಿಲ್ಲಾಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

Leave a Comment