ಆಸ್ತಿ ತೆರಿಗೆಗೆ ಶೇ. 5 ರಷ್ಟು ರಿಯಾಯ್ತಿ

ತುಮಕೂರು, ಮೇ ೨೯- ಕೊರೊನಾ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಷ್ಟು ರಿಯಾಯಿತಿಯನ್ನು ನೀಡಿ ಸರ್ಕಾರ ಆದೇಶ ನೀಡಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀದಾಬೇಗಂ ತಿಳಿಸಿದರು.

ನಗರದ ಪಾಲಿಕೆ ಕಚೇರಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ತೆರಿಗೆ ಪಾವತಿಗೆ ಮೇ ಅಂತ್ಯದವರೆಗೆ ಅವಕಾಶ ನೀಡಲಾಗಿತ್ತು. ಈಗ ಅದನ್ನು ಜುಲೈ ಅಂತ್ಯದವರೆಗೆ ತೆರಿಗೆ ಪಾವತಿಗೆ ಅವಕಾಶ ನೀಡಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿ ಮೂರು ವರ್ಷಕ್ಕೆ ಆಸ್ತಿ ತೆರಿಗೆ ಹೆಚ್ಚಳವಾಗಬೇಕಿದ್ದು, ಅದರಂತೆ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ಒಪ್ಪಿಕೊಂಡಿದ್ದೇವೆ. ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಸದಸ್ಯರು ಒತ್ತಾಯ ಮಾಡಿದ್ದರು. ಶಾಸಕರು, ಸಂಸದರು ಈ ಬಗ್ಗೆ ಮಾತನಾಡುವ ಭರವಸೆ ನೀಡಿದ್ದರು. ಶೇ.15 ರಷ್ಟು ತೆರಿಗೆ ಹೆಚ್ಚಳವನ್ನು ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಸರ್ಕಾರದ ನಿರ್ಧಾರದ ಮೇಲೆ ಆದೇಶ ಪಾಲನೆ ಮಾಡಲಾಗುವುದು ಎಂದರು.

ತುಮಕೂರಿಗರು ನಮ್ಮ ಜವಾಬ್ದಾರಿಯನ್ನು ಅರಿಯಬೇಕು. ಹೊರ ರಾಜ್ಯಗಳಿಂದ ಬಂದವರ ಬಗ್ಗೆ ಮಾಹಿತಿಯನ್ನು ನೀಡಬೇಕು. ತುಮಕೂರನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದರು.

ಆಯುಕ್ತರ ವಿರುದ್ಧ ಗರಂ

ತುಮಕೂರು ಪಾಲಿಕೆ ಆಯುಕ್ತರು ಪಾಲಿಕೆಯಲ್ಲಿ ಹೆಚ್ಚಾಗಿ ಇಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಕೆಳಹಂತದ ಅಧಿಕಾರಿಗಳು ಸಮಯ ವ್ಯರ್ಥ ಮಾಡುತ್ತಿದ್ದು, ಪಾಲಿಕೆ ಆಡಳಿತ ಸರಾಗವಾಗಿಲ್ಲ. ಸ್ಲಂಗಳಲ್ಲಿ ಯುಜಿಡಿ ಕೆಲಸ ನಡೆಯುತ್ತಿಲ್ಲ, ಪಾಲಿಕೆ ಸದಸ್ಯರು ಸಂಪರ್ಕಿಸಿದರೂ ಆಯುಕ್ತರು ಸಿಗುತ್ತಿಲ್ಲ, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಆಡಳಿತ ನಿರ್ವಹಿಸುವುದಾದರೂ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಹಾಗೂ ಆಯುಕ್ತರೆಲ್ಲರೂ ಸ್ಮಾರ್ಟ್‌ಸಿಟಿ ಕೆಲಸ ಎನ್ನುತ್ತಾರೆ. ಕೊರೊನಾದಿಂದಾಗಿ ಅಧಿಕಾರಿಗಳು ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಕೊರೊನಾದ ಕಾರಣದಿಂದಾಗಿ ಅಧಿಕಾರಿಗಳಿಗೆ ಪಾಲಿಕೆ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು ಸದಸ್ಯರನ್ನು ಕೊರೊನಾ ಹೆಸರೇಳಿ ಯಾಮಾರಿಸುತ್ತಿದ್ದಾರೆ. ಆಯುಕ್ತರಿಗೆ ಮೇಯರ್ ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ. ಇದರಿಂದಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ದೂರಿದರು.

ಪಾಲಿಕೆ ಸದಸ್ಯ ಕುಮಾರ್ ಮಾತನಾಡಿ, ಬೆಳಗಾಂಗೆ ಹೋಗಿ ಬರುವ ಮುಂಚೆ ಚೆನ್ನಾಗಿ ಕೆಲಸ ಮಾಡುತ್ತಿದ್ದ ಆಯುಕ್ತರು ಈಗ ಬದಲಾಗಿದ್ದಾರೆ. ಕೆಳವರ್ಗದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದರೆ ಅವರದ್ದು ದಕ್ಷತೆ ಅಲ್ಲ, ಕುಡಿಯುವ ನೀರಿನೊಂದಿಗೆ ಯುಜಿಡಿ ಮಿಶ್ರಿತ ನೀರು, ಒಂದು ವರ್ಷದಿಂದ ಕೆಲಸ ಮಾಡಿಲ್ಲ, ಫೋನ್ ರಿಸೀವ್ ಮಾಡಬೇಕೆಂಬ ಕಾನೂನು ಇಲ್ಲ ಎಂದು ಹೇಳುತ್ತಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಮಹೇಶ್, ಕುಮಾರ್, ಇನಾಯತ್‍ವುಲ್ಲಾಖಾನ್, ಮಲ್ಲಿಕಾರ್ಜುನ್, ವಿಷ್ಣುವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

Share

Leave a Comment