ಆಸ್ಟ್ರೇಲಿಯಾ ೪ ವಿಕೆಟ್‌ಗೆ ೧೬೭

ರಾಂಚಿ, ಮಾ.೧೬- ಆಸ್ಟ್ರೇಲಿಯಾ ತಂಡದವರು ಮೂರನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನವಾದ ಇಂದು ಚಹಾ ವಿರಾಮಕ್ಕೆ ಸುಮಾರು ಒಂದು ಗಂಟೆ ಮುನ್ನ ೫೨ ಓವರ್‌ಗಳಲ್ಲಿ ೪ ವಿಕೆಟ್‌ಗೆ ೧೬೭ ರನ್ ಮಾಡಿದ್ದರು.

ಸ್ಟೀವನ್ ಸ್ಮಿತ್ (೧೩೪ ಎಸೆತಗಳಲ್ಲಿ ೭ ಬೌಂಡರಿಗಳಿದ್ದ ೬೫) ಹಾಗೂ ಪೀಟರ್ ಹ್ಯಾಂಡ್‌ಸ್ಕೊಂಬ್ (೪೪ ಎಸೆತಗಳಲ್ಲಿ ೨ ಬೌಂಡರಿಗಳಿರುವ ೧೮) ಮುರಿಯದ ನಾಲ್ಕನೆ ವಿಕೆಟ್‌ಗೆ ೧೫.೫ ಓವರ್‌ಗಳಲ್ಲಿ ೪೮ ರನ್ ಸೇರಿಸಿ ಆಡುತ್ತಿದ್ದರು.

ಬ್ಯಾಟಿಂಗ್ ಆರಿಸಿಕೊಂಡ ಆಸ್ಟ್ರೇಲಿಯಾಕ್ಕೆ ಡೇವಿಡ್ ವಾರ್ನರ್ (೨೬ ಎಸೆತಗಳಲ್ಲಿ ೨ ಬೌಂಡರಿಗಳಿದ್ದ ೧೯) ಹಾಗೂ ಮ್ಯಾಟ್ ರೆನ್‌ಶಾ (೬೯ ಎಸೆತಗಳಲ್ಲಿ ೪ ಬೌಂಡರಿಗಳಿದ್ದ ೪೪) ೯.೪ ಓವರ್‌ಗಳಲ್ಲಿ ೫೦ ರನ್‌ಗಳ ಆರಂಭ ಒದಗಿಸಿದರು. ರವೀಂದ್ರ ಜಡೇಜ ತಮ್ಮ ಬೌಲಿಂಗ್‌ನಲ್ಲೇ ವಾರ್ನರ್ ನೀಡಿದ ಕ್ಯಾಚ್ ಹಿಡಿದು ಭಾರತಕ್ಕೆ ಮೊದಲ ವಿಕೆಟ್ ಗಳಿಸಿದರು. ರೆನ್‌ಶಾ ಮತ್ತು ಕ್ಯಾಪ್ಟನ್ ಸ್ಟೀವನ್ ಸ್ಮಿತ್ ೨ನೇ ವಿಕೆಟ್‌ಗೆ ೩೦ ರನ್ ಸೇರಿಸಿದ್ದಾಗ, ಕೊಹ್ಲಿ ನೆರವಿನಿಂದ ಉಮೇಶ್ ಯಾದವ್, ರೆನ್‌ಶಾ ಅವರನ್ನು ವಾಪಸು ಕಳುಹಿಸಿದರು. ನಂತರ ಪೂಜಾರ ಹಿಡಿದ ಅತ್ಯುತ್ತಮ ಕ್ಯಾಚ್ ನೆರವಿನಿಂದ ಅಶ್ವಿನ್ ೯ ರನ್ ಸೇರುವಷ್ಟರಲ್ಲಿ ಶಾನ್ ಮಾರ್ಷ್‌ಗೆ (೨) ಜಾಸ್ತಿ ಹೊತ್ತು ನಿಲ್ಲಲು ಆಸ್ಪದ ಕೊಡಲಿಲ್ಲ. ಮೊದಲು ಅಂಪೈರ್ ಔಟ್ ಕೊಟ್ಟಿರಲಿಲ್ಲ; ಆದರೆ ವಿರಾಟ್ ಕೊಹ್ಲಿ ಡಿಆರ್‌ಎಸ್ ಮೊರೆ ಹೊಕ್ಕಾಗ ಟಿವಿ ಅಂಪೈರ್ ನಿಜಲ್ ಲಾಂಗ್ ಅವರೊಡನೆ ಸಮಾಲೋಚಿಸಿದಾಗ ಚೆಂಡು ಪ್ಯಾಡ್‌ಗೆ ತಗಲುವ ಮುನ್ನ ಬ್ಯಾಟ್ ತುದಿಗೆ ಸವರಿದ್ದು ಸ್ಪಷ್ಟವಾಗಿ ಅಂಪೈರ್ ಔಟ್ ನೀಡಿದರು.

Leave a Comment