ಆಷಾಢ ಶುಕ್ರವಾರಗಳು ಪೊಲೀಸರಿಗೇ ಸೀಮಿತವೇ?

ಮೈಸೂರು. ಜು. 14. ಪ್ರತಿ ವರ್ಷ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಚರಿಸಲಾಗುವ ಆಷಾಢ ಶುಕ್ರವಾರಗಳು ಪೊಲೀಸರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಮಾತ್ರ ಸೀಮಿತವಾಗಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಕಳೆದ 12 ರಂದು ಚಾಮುಂಡಿಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದಂದು ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವತೆಯ ದರ್ಶನ ಪಡೆಯಲು ಮುಂಜಾನೆ 3 ಗಂಟೆಯಿಂದಲೇ ಸಾವಿರಾರು ಮಂದಿ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಸರತಿ ಸಾಲು ಈ ವೇಳಗಾಗಲೇ ಸುಮಾರು 2ಕಿ.ಮೀ.ಗಳಷ್ಟು ಬೆಳೆದಿತ್ತು. ಮುಂಜಾನೆ 6 ಗಂಟೆಯ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂತಿ ಭಕ್ತಾಧಿಗಳನ್ನು ನಿಯಂತ್ರಿಸಲು ಆಗಮಿಸಿದ ಪೊಲೀಸರು ಬಹಳ ದರ್ಪದಿಂದಲೇ ಅವರ ಮೇಲೆ ಮಾತನಾಡಲಾರಂಭಿಸಿದರು. ಇದರಿಂದ ಮನನೊಂದ ಭಕ್ತಾಧಿಗಳೂ ಸಹಾ ಪೊಲೀಸರ ವಿರುದ್ಧ ಹರಿಹಾಯ್ದರು. ಇದರಿಂದ ಕೆರಳಿದ ಪೊಲೀಸರು ಹಾಗೂ ಅಶ್ವಾರೋಹಿ ಪೊಲೀಸರು ಕುದುರೆಗಳನ್ನೇ ಭಕ್ತಾಧಿಗಳ ಮೇಲೆ ಹತ್ತಿಸಲು ಮುಂದಾಗುವುದರ ಮೂಲಕ ತಮ್ಮ ದರ್ಪವನ್ನು ಮೆರೆದರು.
ಇಷ್ಟು ಸಾಲದೆಂಬಂತೆ ದೇವಿಯ ದರ್ಶನಕ್ಕಾಗಿ 3 ಸರತಿ ಸಾಲುಗಳನ್ನು ಕಲ್ಪಿಸಿದ್ದರೂ ವಿ.ಐ.ಪಿ. ಗಳಿಗೆ ಪ್ರತ್ಯೇಕ ಮಾರ್ಗವನ್ನು ವ್ಯವಸ್ಧೆ ಮಾಡಲಾಗಿತ್ತು. ಈ ಪ್ರತ್ಯೇಕ ಮಾರ್ಗದ ಮೂಲಕವೇ ಪೊಲೀಸರು ತಮ್ಮ ಕುಟುಂಬ ವರ್ಗದವರನ್ನು ಹಾಗೂ ಪರಿಚಯಸ್ಧರನ್ನು ದೇವಾಲಯದ ಒಳಕ್ಕೆ ಬಿಡುತ್ತಿದ್ದುದ್ದು ಸರತಿಸಾಲಿನಲ್ಲಿ ನಿಂತ ಭಕ್ತಾಧಿಗಳನ್ನು ಕೆರಳಿಸಿತು. ಇದನ್ನು ಪ್ರಶ್ನಿಸಲು ಹೋದ ಭಕ್ತಾಧಿಗಳಿಗೆ ಪೊಲೀಸರಿಂದ ದರ್ಪದ ಉತ್ತರ ಬಂದಿತಲ್ಲದೆ ಅವರ ಮೇಲೆ ಕೈಮಾಡುವ ಸಾಹಸಕ್ಕೂ ಮುಂದಾದ ಪೊಲೀಸರನ್ನು ಕಂಡ ಸಾರ್ವಜನಿಕರು ಶ್ರೀ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಗಳು ಪೊಲೀಸರಿಗೆ ಮಾತ್ರ ಸೀಮಿತವೇ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಏನು ಹೇಳುತ್ತಾರೆ? ಎಂಬುದನ್ನು ಭಕ್ತಾಧಿಗಳು ನಿರೀಕ್ಷಿಸುತ್ತಿದ್ದಾರೆ

Leave a Comment