ಆಶ್ರಯ ಮನೆಗೆ ಅರ್ಜಿ-ಶಾಸಕರ ಮನೆ ಮುಂದೆ ಜಮಾಯಿಸಿದ ಮಹಿಳಾ ಮಣಿಗಳು

ದಾವಣಗೆರೆ, ಆ. 14- ಆಶ್ರಯ ಮನೆಯ ಅರ್ಜಿ ನೀಡಲಾಗುತ್ತಿದೆ ಎಂಬ ಸುದ್ದಿ ಹರಡಿದ ಹಿನ್ನಲೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿವಾಸದ ಮುಂಭಾಗದಲ್ಲಿ ಜನಜಾತ್ರೆಯೇ ಜಮಾಯಿಸಿದೆ. ಮಹಿಳೆಯರು ಅರ್ಜಿ ಪಡೆಯಲು ಮುಗಿಬಿದ್ದು, ಕಚ್ಚಾಡಿರುವ ಘಟನೆಯೂ ಸಹ ನಡೆದಿದೆ. ಕಳೆದ ಶನಿವಾರ ಕೆಲವರು ಆಶ್ರಯ ಮನೆ ಪಡೆಯಲು ಅರ್ಜಿ ಕೊಟ್ಟಿದ್ದಾರೆ. ಈ ಮಾಹಿತಿ ಕ್ಷಣಮಾತ್ರದಲ್ಲಿ ಹಬ್ಬಿದ್ದು, ಮಹಿಳಾ ಮಣಿಗಳು ಅರ್ಜಿ ನೀಡಲು ನಿನ್ನೆ ರಾತ್ರಿ 10 ಗಂಟೆಯಿಂದಲೇ ಮುಗಿಬಿದ್ದಿದ್ದಾರೆ. ಇವರೊಂದಿಗೆ ವೃದ್ದರು, ಬಾಣಂತಿಯರು, ಗರ್ಭಿಣಿ ಮಹಿಳೆಯರು ಸಹ ಸಾಲಿನಲ್ಲಿ ನಿಂತಿದ್ದಾರೆ. ಮಾಹಿತಿ ತಿಳಿದಮೇಲೆ ಇಂದು ಬೆಳಗ್ಗೆಯೂ ಸಹ ಮಹಿಳೆಯರು ಆಗಮಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಸರತಿ ಸಾಲು ಹೆಚ್ಚಾಗಿತ್ತು. ನಗರದ ಭಾರತ್ ಕಾಲೋನಿ, ಎಸ್.ಎಂ. ಕೃಷ್ಣ ನಗರ, ಹೊಂಡದ ಸರ್ಕಲ್, ಅಜಾದ್ ನಗರ, ಶೇಖರಪ್ಪ ನಗರ, ಜಾಲಿನಗರ, ಭಾಷಾನಗರ ಸೇರಿದಂತೆ ವಿವಿಧ ಭಾಗಗಳಿಂದ ಆಶ್ರಯ ಮನೆ ನಿರ್ಮಿಸಿಕೊಡುವಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ವಸತಿಹೀನರು ಶಾಸಕರಿಗೆ ಒತ್ತಾಯಿಸಿದ್ದಾರೆ. ಹೊರಭಾಗದಲ್ಲಿ ಸಾಗರೋಪಾದಿಯಲ್ಲಿ ಜನ ಜಮಾಯಿಸಿದ್ದರು. ಆದರೆ ಶಾಸಕರು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಜನರನ್ನು ಕೆರಳಿಸಿತ್ತು. ಮನೆ ಕೊಡುತ್ತೇವೆ ಎಂದು ಹೇಳಿ ನಮ್ಮನ್ನು ಕರೆಯಿಸಿದ್ದಾರೆ. ಆದರೆ ಈಗ ಯಾವುದೇ ಮಾಹಿತಿ ನೀಡುತ್ತಿಲ್ಲ ಹಾಗೂ ಹೊರಗೆ ಕಳುಹಿಸುತ್ತಿದ್ದಾರೆ ಎಂದು ಮಹಿಳೆಯರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ನಾವು ರಾತ್ರಿಯಿಂದಲೇ ಅರ್ಜಿಗಾಗಿ ಕಾಯುತ್ತಿದ್ದೇವೆ. ಆದರೆ ಈಗ ಬಂದವರು ಅರ್ಜಿಗಾಗಿ ಮುನ್ನುಗ್ಗುತ್ತಿದ್ದಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದು ಕಂಡುಬಂದಿತು. ಅರ್ಜಿ ಪಡೆಯಲು ಬರುತ್ತಿರುವವರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಪರಿಸ್ಥಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಮಹಿಳೆಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಮುಂದಿನ ದಿನಗಳಲ್ಲಿ ಅರ್ಜಿ ನೀಡಲಾಗುತ್ತದೆ. ಈಗ ಹಿಂದಿರುಗಿ ಎಂದು ಬಡಾವಣೆ ಠಾಣೆ ಪಿಎಸ್‍ಐ ವೀರಬಸಪ್ಪ ಕುಸಲಾಪುರ ಮನವಿ ಮಾಡಿದರು. ಅದಕ್ಕೂ ಜಗ್ಗದ ಮಹಿಳೆಯರು ನಮ್ಮನ್ನು ಕರೆಯಿಸಿ ಈಗ ನೀಡುವುದಿಲ್ಲ ಎಂದರೆ ಹೇಗೆ ಪದೇ ಪದೇ ಕೆಲಸ ಕಾರ್ಯ ಬಿಟ್ಟು ಬರಲು ಸಾಧ್ಯವಿಲ್ಲ, ಹೇಗೋ ಬಂದಿದ್ದೇವೆ ನಮಗೆ ಅರ್ಜಿ ನೀಡಿ ಎಂದು ಪಟ್ಟು ಹಿಡಿದರು. ನಂತರ ಮಹಿಳೆಯರನ್ನು ನಿಯಂತ್ರಿಸಿ ಮುಂದಿನಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವುದು ಎಂದು ತಿಳಿಸಿದಾಗ ಹಿಡಿ ಶಾಪ ಹಾಕುತ್ತಾ ಮಹಿಳೆಯರು ಮನೆಗೆ ಹಿಂದಿರುಗಿದ್ದಾರೆ. ಕೆಲವರಂತೂ ಅರ್ಜಿ ಪಡೆದೇ ತೀರುತ್ತೇವೆ ಎಂದು ರಸ್ತೆಯಲ್ಲೇ ಠಿಕಾಣಿ ಹೂಡಿದ್ದಾರೆ. ಅರ್ಜಿ ಪಡೆಯದೇ ಯಾವುದೇ ಕಾರಣಕ್ಕೂ ಮನೆಗೆ ಹೋಗುವುದಿಲ್ಲ ಎಂದು ಹೇಳುತ್ತಿರುವುದು ಕಂಡುಬಂದಿತು.
ಬಾಕ್ಸ್
10ಟಿಛಿ = ಮಹಿಳೆಯರ ಕಾದಾಟ
ಅರ್ಜಿ ಪಡೆಯುವ ಸಲುವಾಗಿ ಮಹಿಳೆಯರು ಅದರಲ್ಲೂ ಗರ್ಭಿಣಿಯರು ಕಿರುಚಾಡಿ ರಾದ್ದಾಂತ ಮಾಡಿರುವ ಘಟನೆ ನಡೆದಿದೆ. ಅರ್ಜಿ ಪಡೆಯುವ ಸಲುವಾಗಿ ಇಬ್ಬರು ಮಹಿಳೆಯರಿಂದ ಆರಂಭವಾದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತೆರಳಿದ್ದು ಕಂಡುಬಂದಿತು. ಸುತ್ತಲೂ ನೆರೆದಿದ್ದ ಮಹಿಳೆಯರು ಜಗಳ ನೋಡುತ್ತಿದ್ದರು ವಿನಹ ಬಿಡಿಸುವ ಗೋಜಿಗೆ ಹೋಗಲಿಲ್ಲ, ಇನ್ನು ಪುಟ್ಟ ಮಕ್ಕಳನ್ನು ಕರೆತಂದಿದ್ದ ಮಹಿಳೆಯರ ಗೋಳು ಹೇಳತೀರದಾಗಿತ್ತು.
ಬಾಕ್ಸ್
ಗದ್ದಲ ಹೆಚ್ಚಾಗಿರುವ ಕಾರಣ ಅರ್ಜಿ ನೀಡುವುದನ್ನು ಸ್ಥಗಿತ ಮಾಡಲಾಗಿದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಗದ್ದಲ ಹೆಚ್ಚಾಗಿರುವುದರಿಂದ ಅರ್ಜಿ ನೀಡಲು ಸಾಧ್ಯವಾಗುತ್ತಿಲ್ಲ. ಜನರು ಸಹ ಸಹಕರಿಸಬೇಕು ಎಂದು ಪೋಲಿಸರು ವಿಶೇಷ ಮನವಿ ಮಾಡಿದರೂ ಸಹ ಮಹಿಳೆಯರು ಸುಮ್ಮನಾಗಲಿಲ್ಲ. ನೂಕುನುಗ್ಗಲು ಹೆಚ್ಚಾಗುತ್ತಿದ್ದನ್ನು ಕಂಡ ಪೋಲೀಸರು ಮಹಿಳೆಯರಿಗೆ ಹಿಂದಿರುಗುವಂತೆ ಮನವಿ ಮಾಡಿದರು. ಆದರೆ ನಾಲ್ಕೈದು ದಿನಗಳಿಂದ ಅಲೆದಾಡುತ್ತಿದ್ದೇವೆ.ನಮ್ಮ ಎಲ್ಲಾ ಕೆಲಸಕಾರ್ಯ ಬಿಟ್ಟು ಬಂದಿದ್ದೇವೆ ಶಾಸಕರು ಹೊರಬಂದು ಅರ್ಜಿಗಳನ್ನು ನೀಡಬೇಕೆಂದು ಪಟ್ಟುಹಿಡಿದರು. ನಂತರ ಬಡಾವಣಾ ಠಾಣೆ ಪಿಎಸ್ ಐ ವೀರಬಸಪ್ಪ ಕುಸಲಾಪುರ ಸಾರ್ವಜನಿಕರಲ್ಲಿ ಮುಂದಿನದಿನದಲ್ಲಿ ಮಹಾನಗರ ಪಾಲಿಕೆ ಕಮಿಷನರ್ ಮೂಲಕ ಅರ್ಜಿ ವಿತರಣೆ ಮಾಡುತ್ತಾರೆ ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.

Leave a Comment