ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ರಾಜ್ಯವ್ಯಾಪಿ ಹೋರಾಟ

ಮೈಸೂರು, ಮೇ.29:- ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳನ್ನು ಖಂಡಿಸಿ ಸೂಕ್ತ ರಕ್ಷಣೆಗೆ ಆಗ್ರಹಿಸಿ ಹಾಗೂ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಆಶಾ ಸಂರಕ್ಷಣಾ ದಿನದ ಅಂಗವಾಗಿ ಇಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ರಾಜ್ಯವ್ಯಾಪಿ ಹೋರಾಟ ನಡೆದಿದ್ದು, ಮೈಸೂರು ಜಿಲ್ಲಾ ಸಮಿತಿ ವತಿಯಿಂದಲೂ ಬೆಂಬಲ ಸೂಚಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಸೇರಿದ ಆಶಾ ಕಾರ್ಯಕರ್ತೆಯರು ಲಾಕ್ ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಉತ್ತಮವಾಗಿ ಕಾರ್ಯನಿರ್ವಹಿಸಿ ರೋಗಾಣು ಹರಡುವಿಕೆ ತಡೆಗಟ್ಟಲು ಶ್ರಮಿಸಿದರು. ರಾಜ್ಯಾದ್ಯಂತ ಕಳೆದ 2ತಿಂಗಳಿನಿಂದ ಅವಿರತ ಸೇವೆಯಲ್ಲಿರುವ ಫ್ರಂಟ್ ಲೈನ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳು ದಿನದಿಂದ ಹೆಚ್ಚುತ್ತಿದ್ದು, ಆಶಾ ಸಮುದಾಯಕ್ಕೆ ಭಯ ಮತ್ತು ಆತಂಕ ಉಂಟು ಮಾಡಿದೆ. ಇದರ ವಿರುದ್ಧ ಮೇ.29ರಂದು ಆಶಾ ಸಂರಕ್ಷಣಾ ದಿನವೆಂದು ಘೋಷಿಸಿ ರಾಜ್ಯ ವ್ಯಾಪಿ ಹೋರಾಟಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಕರೆ ನೀಡಲಾಗಿದೆ ಎಂದರು.
ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಭಯ ಆತಂಕದಲ್ಲೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಈ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ, ಆದಾಯಗಳಿಲ್ಲದೇ ಒತ್ತಡ, ಹತಾಶೆ ರೋಗದ ಕುರಿತ ಆತಂಕ ಜೊತೆಗೆ ಪೌರತ್ವ ಕಾಯ್ದೆಯ ಕುರಿತ ತಮ್ಮ ಗೊಂದಲಗಳಿಂದಾಗಿ ಜನ ವ್ಯಕ್ತಪಡಿಸುತ್ತಿರುವ ಕ್ರೌರ್ಯ ಮತ್ತು ಅಸಹಿಷ್ಣುತೆಗಳಿಗೆ ಇವರು ಬಲಿಪಶುಗಳಾಗುತ್ತಿದ್ದಾರೆ. ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುವಾಗ ಹಲ್ಲೆಗೆ ಒಳಗಾಗುತ್ತಿದ್ದಾರೆ. ಇದನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಫ್ರಂಟ್ ಲೈನ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಮೇಲೆ ದೈಹಿಕ ಹಲ್ಲೆ ಮಾಡಿದವರನ್ನು ಶಿಕ್ಷಿಸಿ ಹಲ್ಲೆಗೆ ಒಳಗಾದ ಆಶಾಗೆ ಸೂಕ್ತ ಪರಿಹಾರ ನೀಡಿ, ಮಾರ್ಚ್ ತಿಂಗಳಿನಿಂದ ಕೋವಿಡ್-19 ಕಾರ್ಯ ನಿಯೋಜನೆ ಇರುವಷ್ಟು ಅವಧಿಗೆ ವಿಶೆಷ ಪ್ಯಾಕೇಜ್ ಮಾಸಿಕ 10,000 ರೂ ಘೋಷಿಸಿ, ಅಗತ್ಯವಿರುವಷ್ಟು ಮಾಸ್ಕ್ ಹಾಗೂ ಸ್ಯಾನಿಟೈಸರ್, ಗ್ಲೌಸ್ಗ್ ಗಳನ್ನು ನೀಡಿ ರಕ್ಷಿಸಿ, ಪಾನಮತ್ತರಾಗಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಗೈದವರಿಗೆ ಉಗ್ರ ಶಿಕ್ಷೆ ನೀಡಿ, ಮದ್ಯ ನಿಷೇಧ ಮಾಡಿ. ಕೋವಿಡ್-19 ನಿಂದಾಗಿ ಸಾವಿಗೀಡಾದ ಆಶಾ ಕುಟುಂಬಕ್ಕೆ ನೀಡುವ 50ಲಕ್ಷರೂ.ವಿಮೆ ಸೌಲಭ್ಯವನ್ನು ಕೋವಿಡ್-19 ಸೇವೆಯಲ್ಲಿರುವಾಗ ಸಾವಿಗೀಡಾದ ಆಶಾ ಕುಟುಂಬಕ್ಕೂ ನೀಡಿ ಎಂದು ಒತ್ತಾಯಿಸಿದರು.
ಈ ಸಂದರ್ಭ ನಗರ ಅಧ್ಯಕ್ಷರಾದ ಸೀಮಾ ಜಿ.ಎಸ್, ಸುನೀತಾ, ಕೋಮಲ, ವೀಣಾ ಕುಮಾರಿ, ಸಂಘದ ಜಿಲ್ಲಾ ಸಲಹೆಗಾರರಾದ ಸಂಧ್ಯಾ ಪಿ.ಎಸ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮೇಟಿ ಮತ್ತಿತರರು ಉಪಸ್ಥಿತರಿದ್ದರು.

Share

Leave a Comment