ಆಶಾಕಾರ್ಯಕರ್ತರನ್ನು ಡಿ ಗ್ರೂಪ್‌ ನೌಕರರೆಂದು ಪರಿಗಣಿಸಲು ಒತ್ತಾಯ

ರಾಯಚೂರು.ಜೂ.19- ಆಶಾ ಕಾರ್ಯಕರ್ತರಿಗೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ 1,000 ರೂ. ಸಹಾಯಧನ ಶೀಘ್ರ ಪಾವತಿಸಬೇಕು, ಮತ್ತು ಕಾರ್ಯಕರ್ತರನ್ನು ಆರೋಗ್ಯ ಇಲಾಖೆಯ ಡಿ ಗ್ರೂಪ್‌ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತರ ಸಂಘ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿತು.

ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆಶಾಕಾರ್ಯಕರ್ತರಿಗೆ 2017 ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ 1000 ರೂ. ಸಹಾಯಧನ ಶೀಘ್ರ ಪಾವತಿಸಬೇಕು, ನೌಕರರನ್ನು ಆರೋಗ್ಯ ಇಲಾಖೆಯ ಡಿ ಗ್ರೂಪ್‌ ನೌಕರರೆಂದು ಪರಿಗಣಿಸಿ, ಅವರಿಗೆ ಉದ್ಯೋಗದ ಭದ್ರತೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಎನ್.ಎನ್.ಎಂ. ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳದೇ ಆಶಾಕಾರ್ಯಕರ್ತರ ಸೇವಾ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿತರಿಸುವ ತಾಯಿಕಾರ್ಡ್‌ ಹಂಚಿಕೆ ಜವಾಬ್ದಾರಿಯನ್ನು ಆಶಾಕಾರ್ಯಕರ್ತರಿಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗರ್ಭಿಣಿ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ಪ್ರಸಾವನೆ ಮಾಡಿಕೊಂಡಲ್ಲಿ ಅವರಿಗೆ ಪ್ರೋತ್ಸಾಹಧನ ನೀಡಬೇಕು ಮತ್ತು ಆಶಾ ಕಾರ್ಯಕರ್ತರಿಗೆ ಕನಿಷ್ಠ ವೇತನ 10,000 ರೂ. ನಿಗಧಿಪಡಿಸಬೇಕೆಂದು ಆಗ್ರಹಿಸಿದರು. ಪಿಹೆಚ್‌ಸಿ ಕೇಂದ್ರಗಳಲ್ಲಿ ತಾಯಿಕಾರ್ಡ್ ಲಭ್ಯವಿರುವುದಿಲ್ಲ. ಕೂಡಲೇ ತಾಯಿಕಾರ್ಡ್ ವಿತರಿಸುವ ವ್ಯವಸ್ಥೆ ಕಲ್ಪಿಸಬೇಕು ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.  ಜಿಲ್ಲಾಧ್ಯಕ್ಷ ಹೆಚ್.ಪದ್ಮಾ, ಶಕುಂತಲಾ, ವಿಜಯಭಾರತಿ, ಕಲಾವತಿ, ಕೆ.ಜಿ.ವೀರೇಶ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment