ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಮೂಡಬಿದ್ರೆ, ಫೆ.೧೬- ವಾರ್ಷಿಕ ಕ್ರೀಡಾಕೂಟ ಅಥವಾ ವಾರ್ಷಿಕ ಪರೀಕ್ಷೆ ಎಂದರೆ ಅದು ವರ್ಷಕ್ಕೊಂದು ಸಲ ನಡೆಯುವಂತದ್ದಲ್ಲ. ವರ್ಷವಿಡೀ ಕಲಿತ ಆಟ ಅಥವಾ ಪಾಠದ ರಿಸಲ್ಟ್‌ನ್ನು ಪಡೆಯುವ ದಿನ. ಮುಖ್ಯವಾಗಿ ನಮಗೆ ಆರೋಗ್ಯ ಭಾಗ್ಯ ಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ ಉತ್ತಮವಾಗಿರಬೇಕಾದರೆ ನಮ್ಮನ್ನು ನಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ ತರಬೇತುದಾರ ಕುರಿಯನ್ ಪಿ. ಮ್ಯಾಥ್ಯೂ ಹೇಳಿದರು.
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಶನಿವಾರ ನಡೆದ ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ನಮ್ಮ ದೇಶದಲ್ಲಿ ಹಣ, ಬುದ್ಧಿವಂತಿಕೆ ಹಾಗೂ ಸಾಮರ್ಥ್ಯದಲ್ಲಿ ಹಿಂಜರಿಕೆ ಇಲ್ಲ ಆದರೆ ದೈಹಿಕ ಸಾಮರ್ಥ್ಯದ ಕೊರತೆ ಇದೆ. ಅಮ್ಮಂದಿರಿಗೆ, ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ,ವಿಜ್ಞಾನಿಗಳಿಗೆ, ಐಎಎಸ್ ಅಧಿಕಾರಿಗಳಿಗೆ ಹೀಗೆ ಎಲ್ಲರಿಗೂ ಆರೋಗ್ಯವೇ ಭಾಗ್ಯ ಮುಖ್ಯ. ಅದಕ್ಕಾಗಿ ಇದೀಗ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ವಾರಕ್ಕೊಂದು ಸಲ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ದೈಹಿಕ ಸಾಮಥ್ರ್ಯವನ್ನು ವೃದ್ಧಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕ್ರೀಡಾಪಟುಗಳಾದ ಸೌಮ್ಯಶ್ರೀ, ಅಂಕಿತ, ಚೈತ್ರ ದೇವಾಡಿಗ, ಸೃಷ್ಟಿ, ವಿಷ್ಣು, ಮಹಮ್ಮದ್ ಸಫಾನ್, ಬಸವರಾಜ್ ನೀಲಪ್ಪ ಕ್ರೀಡಾಜ್ಯೋತಿ ಬೆಳಗಿಸಿದರು. ಕ್ರೀಡಾಪಟು ಪ್ರದ್ಯುಮ್ನ ಬೋಪಯ್ಯ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೃಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment